ವಿಷದ ಬಟಲು ಹಿಡಿದುಕೊಂಡು ಪುರಸಭೆ ಮುಂದೆ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.06:-ಪಟ್ಟಣದ ಪುರಸಭಾ ವಾಣಿಜ್ಯ ಮಳಿಗೆಗಳನ್ನು ಇ-ಪ್ರಕ್ಯೂರ್‍ಮೆಂಟ್ ಪ್ರಕಾರ ಬಹಿರಂಗ ಹರಾಜು ನಡೆಸಿ ಈಗ ಏಕಾಏಕಿ ಬಿಡ್ಡುದಾರರ ಹತ್ತಿ ಹಣವನ್ನು ಕಟ್ಟಿಸಿಕೊಳ್ಳದೆ ಡಿಸಿ, ಎಸಿಯವರಿಂದ ಆದೇಶ ಬಂದಿಲ್ಲ ಎಂದು ಸುಳ್ಳುಹೇಳುತ್ತಾ ಹಳೆ ಬಾಡಿಗೆದಾರರಿಂದ ಲಂಚ ಪಡೆದು ಹಳಬರಿಗೆ 5% ಬಾಡಿಗೆ ಹೆಚ್ಚಿಸಿ ಮಳಿಗೆ ಕೊಡುವುದಾಗಿ ಹೇಳುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ಮಳಿಗೆ ಬಿಡ್ಡುದಾರರು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಪುರಸಭೆ ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರಾದ ರುದ್ರೇಶ್, ಚಿರಾಗ್, ರಾಚು, ಕೃತಿಕ್, ಅಮೃತ್‍ಗೌಡ, ಸೈಯ್ಯದ್, ನೇಮತ್, ಪ್ರಧೀಪ್, ಮತ್ತಿತರರು ಈಗಾಗಲೆ ಫೆ.24ರಂದು ಪುರಸಭೆಯ ಎಲ್ಲಾ 74 ಮಳಿಗೆಗಳಿಗೆ ಆನ್‍ಲೈನ್‍ನಲ್ಲಿ ಬಿಡ್ ಆಗಿದ್ದು ನಾವೆಲ್ಲರೂ ಅದರಲ್ಲಿ ಭಾಗವಹಿಸಿ ಮಳಿಗೆ ಪಡೆಯಲು ಬಾಡಿಗೆಯನ್ನು ಕೂಗಿದ್ಧೇವೆ.
ಅಂತೆಯೆ ಆನ್‍ಲೈನ್‍ನಲ್ಲಿ ಪ್ರಕಟವಾದ ಎಲ್ಲಾ ಷರತ್ತುಗಳಿಗೆ ಬದ್ದರಾಗಿದ್ದು ಯಶಸ್ವಿ ಬಿಡ್ಡುದಾರರಾಗಿರುತ್ತೇವೆ. ಆದರೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಜಯಣ್ಣ ಯಾವುದೋ ಹೊಸ ರೂಲ್ಸ್ ಇದೆ ಎಂದು ಹೇಳಿ ಹಳೆ ಮಳಿಗೆದಾರರಿಗೆ 5% ಹೆಚ್ಚು ಮಾಡಿ ಹಳೆ ಬಾಡಿಗೆದಾರರಿಗೆ ಮಳಿಗೆ ನೀಡುವುದಾಗಿ ಹೇಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಇಂತಹ ಯಾವುದೆ ವಿಚಾರ ಪ್ರಕಟಣೆಯಲ್ಲಿ ಇರಲಿಲ್ಲ ಹಳೆಬರಿಗೆ ಮಳಿಗೆ ನೀಡುವುದಾದರೆ ಆನ್‍ಲೈನ್‍ನಲ್ಲಿ ಏಕೆ ಬಹಿರಂಗ ಹರಾಜು ಪ್ರಕ್ರಿಯೆ ಮಾಡಿದರು ಎಂದು ಪ್ರಶ್ನಿಸಿದ ಅವರು ಇದರಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಾಣುವುದರಿಂದ ಈ ಬಗ್ಗೆ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮಧ್ಯೆಪ್ರವೇಶ ಮಾಡಿ ಹರಾಜಿನಲ್ಲಿ ಭಾಗವಹಿಸಿ ಬಾಡಿಗೆ ಕೂಗಿರುವವರಿಗೆ ಮಳಿಗೆ ನೀಡುವಂತೆ ಒತ್ತಾಯಿಸಿದರು.
ಮುಖ್ಯಾಧಿಕಾರಿಗಳ ಇಂತಹ ವರ್ತನೆಯಿಂದ ನಿಜವಾಗಿ ಬಿಡ್‍ನಲ್ಲಿ ಭಾಗವಹಿಸಿ ಮಳಿಗೆ ಪಡೆದವರಿಗೆ ಅನ್ಯಾಯವಾಗುವುದನ್ನು ತಪ್ಪಿಸುವಂತೆ ಮನವಿ ಮಾಡಿದ ಅವರು ತಪ್ಪಿದಲ್ಲಿ ಪುರಸಭೆ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಇದಕ್ಕೆ ಪುರಸಭೆ ಆಡಳಿತವೆ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನರಗುಂದ್, ಗ್ರೇಡ್2 ತಹಸೀಲ್ದಾರ್ ಬಾಲಸುಬ್ರಹ್ಮಣ್ಯ, ಸರ್ಕಲ್ ಇನ್ಸ್ಪೆಕ್ಟರ್ ಪಿ.ಪಿ.ಸಂತೋಷ್ ಪ್ರತಿಭಟನಾಕಾರರಿಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಮನವೊಲಿಸಿ ಪ್ರತಿಭಟನೆ ಹಿಂತೆಗದುಕೊಳ್ಳುವಲ್ಲಿ ಯಶಸ್ವಿಯಾದರು.