ವಿಷಕಾರಿ ಮೇವು ತಿಂದು 34 ಕುರಿಗಳ ಸಾವು

ದಾವಣಗೆರೆ.ಏ.೨: ಅಡಕೆ ತೋಟದಲ್ಲಿ  ಬೆಳೆದಿದ್ದ ವಿಷಕಾರಿ  ಮೇವು ತಿಂದು ಇದ್ದಕ್ಕಿದ್ದಂತೆ ಕುರಿಗಳು ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಡೆದಿದೆ.ವಿಷಕಾರಿ‌ ಹುಲ್ಲು ತಿಂದ ಪರಿಣಾಮ 34 ಕುರಿಗಳ ಸಾವನ್ನಪ್ಪಿದ್ದು, ಡಿ.ಮಂಜಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಚಿತ್ರದುರ್ಗ ಜಿಲ್ಲೆಯ  ಹಿರಿಯೂರು ತಾಲೂಕಿನ ಕುರಿದಾಸರಹಳ್ಳಿ ನಿವಾಸಿ ಡಿ. ಮಂಜಪ್ಪ ತನ್ನ ಕುರಿ ಮಂದೆಯನ್ನು ಮೇಯಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ ಕುರಿಗಳು ಸಾವನ್ನಪ್ಪಿವೆ.‌ ಇನ್ನೂ ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿದ್ದು, ಸಕಾಲಕ್ಕೆ ಆಗಮಿಸಿದ ಪಶುವೈದ್ಯರಿಂದ ಚಿಕಿತ್ಸೆ ದೊರೆತ ಪರಿಣಾಮ ಉಳಿದ ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ. ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.