ಕಲಬುರಗಿ:ಸೆ.28:ಅಫಘಾತ, ಆಘಾತ ಮತ್ತು ಹೃದಯ ಸಂಬಂಧಿ ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ ಅಕ್ಟೋಬರ್ 1 ರಿಂದ ಅಕ್ಟೋಬರ್ 5ರ ವರೆಗೆ ಹೃದಯ ಸಪ್ತಾಹ ಹಮ್ಮಿಕೊಂಡಿದ್ದು ಈ ಅವಧಿಯಲ್ಲಿ ಹೃದ್ರೋಗಿಗಳಿಗೆ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಹೃದಯ ಸಂಬಂಧಿ ಪರೀಕ್ಷಾ ಸೇವೆಗಳನ್ನು ನೀಡಲಿದೆ ಎಂದು ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಡಾ. ವಿಕ್ರಂ ಸಿದ್ದಾರೆಡ್ಡಿಯವರು ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಈ ಅವಧಿಯಲ್ಲಿ ಹೃದ್ರೋಗಿಗಳಿಗೆ ಇಸಿಜಿ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು ಹಾಗೂ ಹೃದಯ ತಜ್ಞರಿಂದ ಉಚಿತ ಸಮಾಲೋಚನಾ ಸೇವೆಯನ್ನು ನೀಡಲಾಗುವುದು ಎಂದಿದ್ದಾರೆ.
“ಹೃದಯ ಸಪ್ತಾಹದ ಅವಧಿಯಲ್ಲಿ ಹೃದ್ರೋಗಿಗಳಿಗೆ ಇಸಿಜಿ, ರಕ್ತದೊತ್ತಡ, ಮಧುಮೇಹ ಪರೀಕ್ಷೆಗಳನ್ನು ಉಚಿತವಾಗಿ ನೀಡಲಾಗುವುದು. ನಮ್ಮ ಹೃದಯ ತಜ್ಞರು ಉಚಿತವಾಗಿ ರೋಗಿಗಳ ತಪಾಸಣೆ ಮಾಡುವರು. ಒಂದು ವೇಳೆ ಅವರು ಇನ್ನೂ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಳನ್ನು ಮಾಡಲು ಹೇಳಿದರೆ ಅವುಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾಡಲಾಗುವುದು. ಕಲಬುರಗಿ ಮತ್ತು ಸುತ್ತಮುತ್ತಲ ಜನರು ಅಕ್ಟೋಬರ್ 1 ರಿಂದ ಅಕ್ಟೋಬರ್ 5ರ ವರೆಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಅವಧಿಯಲ್ಲಿ ಯುನೈಟೆಡ್ ಆಸ್ಪತ್ರೆಗೆ ಭೇಟಿ ನೀಡಿ ಈ ಅವಕಾಶದ ಸದುಪಯೋಗ ಮಾಡಕೊಳ್ಳಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ,” ಎಂದು ಡಾ. ಸಿದ್ದಾರೆಡ್ಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
24×7 ಹೃದಯ ಸೇವೆಗಳು:
ವಿಭಿನ್ನ ರೀತಿಯ ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್, ಹಾರ್ಟ್—ಲಂಗ್ ಮಶೀನ್ ರೀತಿಯ ಅತ್ಯಾಧುನಿಕ ಉಪಕರಣಗಳು ಮತ್ತು ಉತ್ಕೃಷ್ಟ ದರ್ಜೆಯ ತೀವ್ರ ಹೃದಯ ನಿಗಾ ಘಟಕ (ICCU) ಲಬ್ಯವಿದ್ದು ರ್ಜೆಯ ಮೂಲಸೌಕರ್ಯಗಳು ಮತ್ತು ಲಬ್ಯವಿದ್ದು ವಯಸ್ಕರರಿಗೆ ಮತ್ತು ಮಕ್ಕಳಿಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ಹೃದಯ ಚಿಕಿತ್ಸೆಗಳನ್ನು ನೀಡಲಾಗುವುದು ಎಂದು ಡಾ. ಸಿದ್ದಾರೆಡ್ಡಿಯವರು ತಿಳಿಸಿದ್ದಾರೆ.
“ಹೃದಯ ಸಂಬಂಧಿ ಖಾಯಿಲೆಗಳ ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಹೃದಯ ವಿಭಾಗವನ್ನು ತೆರೆದಿದ್ದೇವೆ. ಸುಮಾರು ಹದಿನೈದು ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರುವ ಹಿರಿಯ ಹೃದಯ ತಜ್ಞ ಡಾ. ಬಸವಪ್ರಭು ಅಮರಖೇಡ್ ಅವರು ಈ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಎಂಜಿಯೋಗ್ರಾಮ್, ಎಂಜಿಯೋಪ್ಲಾಸ್ಟಿ/ ಸ್ಟೆಂಟಿಂಗ್, ಪೇಸ್ಮೇ ಕರ್, ಎಲೆಕ್ಟ್ರೋಫಿಜಿಯಾಲಜಿ ಅಧ್ಯಯನ, ಕವಾಟು ಚಿಕಿತ್ಸೆ ಮುಂತಾದ ಎಲ್ಲಾ ರೀತಿಯ ಹೃದಯ ಖಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ದಿನ ಇಪ್ಪತ್ನಾಲ್ಕು ಗಂಟೆಗಳೂ ನೀಡಲಾಗುತ್ತದೆ,” ಎಂದು ಸಿದ್ದಾರೆಡ್ಡಿಯವರು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ ಉಚಿತ:
ಬಡತನ ರೇಖೆಗಿಂತ ಕೆಳಗಿರುವ ರೋಗಿಗಳಿಗೆ, ಅಂದರೆ ಬಿಪಿಎಲ್ ಮತ್ತು ಆಯುಶ್ಮಾನ್ ಕಾರ್ಡುಗಳನ್ನು ಹೊಂದಿರುವ ರೋಗಿಗಳಿಗೆ ಯುನೈಟೆಡ್ ಆಸ್ಪತ್ರೆಯು ಭರವಸೆಯ ಕಿರಣವಾಗಿದ್ದು ಅಂತಹ ಬಡರೋಗಿಗಳಿಗೆ ಉಚಿತವಾಗಿ ಹೃದಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
“ಇತ್ತೀಚೆಗೆ ಸುಮಾರು 60 ವರ್ಷ ವಯಸ್ಸಿನ ಎದೆನೋವು ಮತ್ತು ಸಣ್ಣ ಪ್ರಮಾಣದ ಹೃದಯಾಘಾತಕ್ಕೆ ಒಳಗಾಗಿದ್ದ ಪುರುಷ ರೋಗಿಯೊಬ್ಬರು ಯುನೈಟೆಡ್ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಎಂಜಿಯೋಗ್ರಾಂ ಮಾಡಿದಾಗ ಕೊರೊನರಿ ರಕ್ತನಾಳಗಳು ಕಟ್ಟಿಕೊಂಡಿರುವುದು ಗೊತ್ತಾಯಿತು. ಕೂಡಲೇ ಅವರಿಗೆ ಬೈಪಾಸ್ ಸರ್ಜರಿಯ ಅವಶ್ಯಕತೆಯಿತ್ತು. ಆದರೆ, ಬಡ ಕುಟುಂಬಕ್ಕೆ ಬೈಪಾಸ್ ಸರ್ಜರಿಗೆ ಬೇಕಾದಷ್ಟು ಹಣ ಇರಲಿಲ್ಲ. ಆದರೆ, ಡಾ. ಅರುಣ್ ಕುಮಾರ್ ಹರಿದಾಸ್ ಅವರ ನೇತೃತ್ವದ ವೈದ್ಯರ ತಂಡ ರೋಗಿಗೆ ಯಶಸ್ವಿಯಾಗಿ ಬೈಪಾಸ್ ಸರ್ಜರಿ ಮಾಡಿತು. ಯುನೈಟೆಡ್ ಆಸ್ಪತ್ರೆಯು ರೋಗಿಯಿಂದ ಚಿಕಿತ್ಸೆಗಾಗಿ ಹಣ ಪಡೆಯಲಿಲ್ಲ. ಬಿಪಿಎಲ್ ಮತ್ತು ಆಯುಷ್ಮಾನ್ ಕಾರ್ಡುಗಳನ್ನು ಹೊಂದಿರುವ ಬಡ ರೋಗಿಗಳು ಯುನೈಟೆಡ್ ಆಸ್ಪತ್ರೆಯಲ್ಲಿ ಉಚಿತವಾಗಿ ಹೃದಯ ಸಂಬಂಧಿ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದಾಗಿದೆ,” ಎಂದು ಡಾ. ಸಿದ್ದಾರೆಡ್ಡಿ ತಿಳಿಸಿದ್ದಾರೆ.
ಹೃದಯವನ್ನು ಸುರಕ್ಷಿತವಾಗಿಟ್ಟುಕೊಳ್ಳಿ
ಹೃದಯ ನಾಳಗಳಲ್ಲಿ ಕೊಬ್ಬು ತುಂಬಿಕೊಂಡು ಹೃದಯಸ್ನಾಯುಗಳಿಗೆ ರಕ್ತಸಂಚಾರ ನಿಲ್ಲುವುದಿರಂದ ಹೃದಯಾಘಾತ ಸಂಬಭವಿಸುತ್ತದೆ ಎಂದು ಅಭಿಪ್ರಾಯಪಟ್ಟ ಹೃದಯ ತಜ್ಞರಾದ ಡಾ. ಅಮರಖೇಡ ಮತ್ತು ಡಾ. ಹರಿದಾಸ್ ಆರೋಗ್ಯಯುತ ಅಭ್ಯಾಸಗಳನ್ನು, ಆಹಾರ ಕ್ರಮವನ್ನು ರೂಡಿಸಿಕೊಳ್ಳುವುದಿರಂದ ಹೃದಯವನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದರು.
“ಎದುನೋವು, ಕುತ್ತಿಗೆ ನೋವು, ವಿಪರೀತ ಬೆವರುವುದು, ಎದೆ ಬಿಗಿಯಾದಂತೆ ಭಾಸವಾಗುವುದು, ನಿಸ್ತೇಜವಾಗುವುದು ಮುಂತಾದವುಗಳು ಹೃದಯಾಘಾತದ ಲಕ್ಷಣಗಳು. ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ ಕೂಡಲೇ ಯುನೈಟೆಡ್ ಆಸ್ಪತ್ರೆಯಂತಹ ಅತ್ಯಾಧುನಿಕ ಆರೋಗ್ಯ ಕೇಂದ್ರಕ್ಕೆ ಧಾವಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಬೇಕು. ಧೂಮಪಾನ, ಮದ್ಯಪಾನ, ಅನಿಯಂತ್ರಿತ ಮಧುಮೇಹ, ಅನಿಯಂತ್ರಿತ ರಕ್ತದೊತ್ತಡ, ಒತ್ತಡ ಮುಂತಾದವುಗಳು ಹೃದಯಾಘಾತಕ್ಕೆ ಕಾರಣಗಳಾಗಿವೆ. ಜನರು ತಮ್ಮ ಹೃದಯವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಉತ್ತಮವಾದ ಆಹಾರ ಸೇವನೆ, ನಿಗದಿತ ವ್ಯಾಯಾಮ ಮುಂತಾದವುಗಳನ್ನು ರೂಡಿಸಿಕೊಳ್ಳಬೇಕು. ಸ್ತೂಲಕಾಯ, ರಕ್ತದೊತ್ತಡ, ಮಧುಮೇಹಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು,” ಎಂದು ಅವರು ಸಲಹೆ ನೀಡಿದರು.
“ಒತ್ತಡರಹಿತ ಜೀವನ ನಡೆಸುವುದು ಎಲ್ಲಕ್ಕಿಂತ ಮುಖ್ಯವಾದದ್ದು. ಇದರಿಂದ ಹೃದಯವೂ ಚೆನ್ನಾಗಿರುತ್ತದೆ ಹಾಗೂ ಒಟ್ಟಾರೆ ಆರೋಗ್ಯವೂ ಉತ್ತಮವಾಗಿರುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.