ರಾಯಚೂರು.ಅ.೦೩(ಕ.ವಾ):- ಹಿರಿಯ ನಾಗರಿಕರು ಸರ್ಕಾರದಿಂದ ನೀಡಲಾಗುವ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ತಮ್ಮ ನಿವೃತ್ತ ಬದುಕು ಹಾಗೂ ಮುಪ್ಪಿನ ಜೀವನವನ್ನು ಅತ್ಯಂತ ಸಂತೋಷದಿಂದ ಬದುಕಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅವರು ಹೇಳಿದರು.
ಅವರು ಅ.೦೩ರ(ಬುಧವಾರ) ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಬಾಲ್ಯವಸ್ಥೆ, ಯೌವನಾವಸ್ಥೆ ಹಾಗೂ ಮುಪ್ಪಿನಾವಸ್ಥೆಯನ್ನು ಕಾಣುವ ಹಿರಿಯರು ತಮ್ಮ ಮುಪ್ಪಿನ ಬದುಕಿನಲ್ಲಿ ಎಲ್ಲರೊಂದಿಗೆ ಸ್ನೇಹ ಹಾಗೂ ಆತ್ಮೀಯತೆಯಿಂದ ಇರಬೇಕು. ಹಾಗೂ ಇಂದಿನ ಯುವ ಪೀಳಿಗೆ ತಮ್ಮ ಹಿರಿಯರನ್ನು ಅತ್ಯಂತ ಕಾಳಜಿಯಿಮದ ನೋಡಿಕೊಳ್ಳಬೇಕು ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.
೧೦೦ ವರ್ಷ ಪೂರೈಸಿದ ಹಿರಿಯ ಮತದಾರರಿಗೆ ಸರ್ಕಾರದಿಂದ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ ಮತ್ತು ಅವರನ್ನು ವಿಶೇಷ ರೀತಿಯಲ್ಲಿ ಕಾಣಲಾಗುತ್ತದೆ. ಮತದಾನ ಪಟ್ಟಿಯಲ್ಲಿ ಪುನರ್ ನಿರ್ಮಾಣ ಮಾಡಲು ಅರ್ಜಿ ಸಲ್ಲಿಸಿ ಮತದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದರು.
ಹಿರಿಯರ ಸಮಸ್ಯೆಗಳಿಗೆ ಸ್ಪಂಧಿಸಲು ಸರ್ಕಾರದಿಂದ ಹಿರಿಯ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇದರಿಂದ ಹಿರಿಯರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಹಿರಿಯರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಅವಾಗಲೇ ಹಿರಿಯರಿಗೆ ಶಾರೀರಿಕವಾಗಿ ವಯಸ್ಸಾಗಿರುತ್ತದೆ ಹೊರತೆ ಮಾನಸಿಕವಾಗಿ ವಯಸ್ಸಾಗಿರುವುದಿಲ್ಲ ಹಿರಿಯ ನಾಗರಿಕರಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ನಂತರ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ನ್ಯಾಯ ಮಂಡಳಿಯ ಅಧ್ಯಕ್ಷರು ಹಾಗೂ ಸಹಾಯಕ ಆಯುಕ್ತರಾದ ಮಹಿಬೂಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಎಮ್.ಎನ್.ಚೇತನಕುಮಾರ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್, ಪವನ್ ಪಾಟೀಲ್, ಹಿರಿಯ ನಾಗರಿಕರಾದ ಮಹಾದೇವಪ್ಪ, ಶೇಖ್ ಅಸರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.