
ಸಂಜೆವಾಣಿ ವಾರ್ತೆ
ದಾವಣಗೆರೆ; ಆ. 3; ಮಗವನ್ನು ನ್ಯೂಮೋನಿಯಾ ಅತೀಸಾರ ಭೇದಿ ಅಪೌಷ್ಠಿಕತೆ ಇವುಗಳಿಂದ ತಡೆಗಟ್ಟಲು ಸ್ತನ್ಯಪಾನವು ಅತ್ಯಂತ ಮಹತ್ವಪೂರ್ಣ ಪಾತ್ರವಹಿಸುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ ಪಿ ಪಟಗೆ ತಿಳಿಸಿದರು.ಭಾಷಾ ನಗರದಲ್ಲಿರುವ ಪ್ರಸೂತಿ ಆರೈಕೆ ಕೇಂದ್ರದಲ್ಲಿ ಜರುಗಿದ ವಿಶ್ವ ಸ್ತನ್ಯಪಾನ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಹೆರಿಗೆ ಪ್ರಮಾಣ ಹೆಚ್ಚಾಗಿದ್ದರೂ ಸಹ ತಾಯಿ ಮಗುವಿಗೆ ಎದೆ ಹಾಲು ಕುಡಿಸುವ ಪ್ರಮಾಣ ಕಡಿಮೆ ಆಗಿದೆ. ಮಗುವಿಗೆ 6 ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ಉಣಿಸಬೇಕು. ಇದರಿಂದ ಶಿಶುಗಳಿಗೆ ಬರುವಂತಹ ಸೋಂಕು ರೋಗಗಳನ್ನು ತಡೆಗಟ್ಟಿ, ಶಿಶು ಮರಣಗಳನ್ನು ತಪ್ಪಿಸಬಹುದು ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಉಮಾಪತಿ ಎಲ್ಲಾ ತಾಯಂದಿರಿಗೆ ಸ್ತನ್ಯ ಪಾನವನ್ನು ಬೆಂಬಲಿಸುವಂತೆ “ನಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಸೇವೆಗಳಿಗೆ ದಾಖಲಾಗುವ ಎಲ್ಲಾ ತಾಯಂದಿರಿಗೂ ಸ್ತನ್ಯ ಪಾನವನ್ನು ಸಕ್ರಿಯವಾಗಿ ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ. ನಮ್ಮ ಆಸ್ಪತ್ರೆಯಲ್ಲಿ ಸ್ತನ್ಯಪಾನವನ್ನು ರಕ್ಷಿಸಲು ಉತ್ತೇಜಿಸಲು ಮತ್ತು ಬೆಂಬಲಿಸಲು ನನ್ನ ಕಡೆಯಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ. ಪ್ರಸವ ನಂತರದ ಆರೈಕೆಯಲಿ ್ಲಆಸ್ಪತ್ರೆಯಲ್ಲಿದ್ದಾಗ ಕಡ್ಡಾಯವಾಗಿ 6 ತಿಂಗಳು ಸಂಪೂರ್ಣ ಸ್ತನ್ಯಪಾನವನ್ನು ಅಭ್ಯಾಸ ಮಾಡಲು ತಾಯಂದಿರಿಗೆ ಬೆಂಬಲ ನೀಡುತ್ತೇನೆ ಎಂಬ ಪ್ರತಿಜ್ಞೆಯನ್ನು ಭೋಧಿಸಿದರು.ಪ್ರಸೂತಿ ವೈದ್ಯಾಧಿಕಾರಿ ಡಾ. ರೇಖಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟಾಚಲ ಕುಮಾರ್ .ಟಿ.ಎಸ್, ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
=====