ವಿಶ್ವ ಸ್ಕೀಜೋಫ್ರೀನಿಯಾ ಜಾಗೃತಿ ಕಾರ್ಯಕ್ರಮ

ಧಾರವಾಡ,ಮೇ25: ವಿಶ್ವದಾದ್ಯಂತ ಪ್ರತಿ ವರ್ಷ ಮೇ 24 ರಂದು ವಿಶ್ವ ಸ್ಕೀಜೋಫ್ರೀನಿಯಾ (ಚಿತ್ತವಿಕಲತೆ) ದಿನಾಚರಣೆಯನ್ನು ಸಾರ್ವಜನಿಕರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮಾಡಲಾಗುತ್ತದೆ. ಇದರ ಅಂಗವಾಗಿ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್), ಧಾರವಾಡದ ಓ.ಪಿ.ಡಿ ವಿಭಾಗದಲ್ಲಿ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ ಮತ್ತು ಸಮುದಾಯ ಆಧಾರಿತ ಆರೋಗ್ಯ ಕಾರ್ಯಕ್ರಮಗಳ ಘಟಕ ದ ವತಿಯಿಂದ “ವಿಶ್ವ ಸ್ಕೀಜೋಫ್ರೀನಿಯಾ ದಿನಾಚರಣೆ” ಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ಡಾ.ರಾಘವೇಂದ್ರ ನಾಯಕ್, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ ಇವರು ಸ್ಕೀಜೋಫ್ರೀನಿಯಾ ಕಾಯಿಲೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇವರು ಮಾತನಾಡಿ ಸ್ಕೀಜೋಫ್ರೀನಿಯಾ ಎನ್ನುವುದು ಒಂದು ರೀತಿಯ ಮಾನಸಿಕ ಕಾಯಿಲೆಯಾಗಿದ್ದು, ಇದು ಮಿದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದೆ, ಈ ಕಾಯಿಲೆಯು ಮಿದುಳಿನಲ್ಲಿ ಆಗುವ ಕೆಲವು ರಸಾಯನಿಕ ಬದಲಾವಣೆಗಳಿಂದ ಮತ್ತು ಇತರ ಕೆಲವು ಕಾರಣಗಳಿಂದ ಬರುತ್ತದೆ, ಈ ಕಾಯಿಲೆಯನ್ನು ಹೊಂದಿದ ರೋಗಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧೋಪಚಾರವನ್ನು ನೀಡಿದಲ್ಲಿ ಈ ಮಾನಸಿಕ ಕಾಯಿಲೆಯು ನಿಯಂತ್ರಣದಲ್ಲಿ ಬರುತ್ತದೆ ಮತ್ತು ಚೇತರಿಸಿಕೊಳ್ಳಲು ನೆರವಾಗುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಅಸಂಘಟಿತ ವಿಚಾರಗಳು, ಸಾಮಾಜಿಕ ಚಟುವಟಿಕೆಗಳಲ್ಲಿ ಸಾಮಥ್ರ್ಯ ಕುಂಠಿತಗೊಳ್ಳುವುದು, ಬೇರೆಯವರಿಗೆ ಕೇಳಿಸಿದ ಧ್ವನಿಗಳನ್ನು ಕೇಳಿಸಿಕೊಳ್ಳುವುದು, ಸತ್ಯವಲ್ಲದ ವಿಷಯಗಳನ್ನು ನಂಬುವುದು, ಅತ್ಯಂತ ಅನುಮಾನಾಸ್ಪದ ನಡವಳಿಕೆ, ಭಯ, ಇತರರಿಗೆ ಸಾಧ್ಯವಾಗದ ದೃಶ್ಯಗಳನ್ನು ನೋಡುವುದು, ತನ್ನಷ್ಟಕ್ಕೆ ತಾನೇ ಮಾತನಾಡುವುದು ಮತ್ತು ನಗುವುದು ಇತ್ಯಾದಿ ಲಕ್ಷಣಗಳನ್ನು ಹೊಂದಿರುತ್ತಾರೆ.
ಈ ಕಾಯಿಲೆಯು ಆರಂಭವಾದ ಆರಂಭಿಕ ದಿನಗಳಲ್ಲಿ ಮನೋವೈದ್ಯರ ಬಳಿ ರೋಗಿಯನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದಲ್ಲಿ ರೋಗಿಯು ಬೇಗ ಚೇತರಿಸಿಕೊಳ್ಳುತ್ತಾನೆ. ಈ ಕಾಯಿಲೆ ಆರಂಭವಾದ ನಂತರ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದರೆ ರೋಗವು ನಿಯಂತ್ರಣ ಬರಲು ಹೆಚ್ಚು ಅವಧಿ ತೆಗೆದುಕೊಳ್ಳುತ್ತದೆ. ಈ ಕಾಯಿಲೆಯು ಯಾರಿಗೆ ಬೇಕಾದರೂ ಬರಬಹುದು ಇದು ಕೇವಲ ಬಡವರಿಗೆ ಬರುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ. ಯಾವುದೇ ಮೂಢನಂಬಿಕೆಗಳಿಗೆ ನಂಬದೇ ಮನೋವೈದ್ಯರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಂಡಲ್ಲಿ ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ಪ್ರಯೋಜನವಾಗುತ್ತದೆ. ಸ್ಕೀಜೋಫ್ರೀನಿಯಾ ಹೊಂದಿರುವವರ ಬಗ್ಗೆ ಭಯಪಡಬೇಡಿ, ಅವರಿಗೆ ಬೇಕಾಗಿರುವುದು ನಿಮ್ಮ ವಿಶಾಲ ಹೃದಯ ಮತ್ತು ತುಂಬು ಪ್ರೀತಿಯ ಕಾಳಜಿ. ಇಂತಹ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಸಂಭಂಧಿಕರು ವಿಳಂಬ ಮಾಡಬಾರದು. ಈ ಕಾಯಿಲೆ ಹೊಂದಿರುವ ಜನರು ಸೂಕ್ತ ಚಿಕಿತ್ಸೆ ಮತ್ತು ಔಷಧೋಪಚಾರ ಪಡೆದುಕೊಂಡಲ್ಲಿ ಬೇಗ ಚೇತರಿಸಿಕೊಳ್ಳಲು ಸಹಾಯಕವಾಗುತ್ತದೆ. ಈ ಕಾಯಿಲೆ ಬಗ್ಗೆ ಸಂದೇಹಗಳಿದ್ದಲ್ಲಿ ಮಾನಸಿಕ ಆರೋಗ್ಯ ತಜ್ಞರು ಅಥವಾ ಮನೋವೈದ್ಯರಿಂದ ಸಹಾಯವನ್ನು ಪಡೆದುಕೊಂಡಲ್ಲಿ ಪ್ರಯೋಜನವಾಗುತ್ತದೆಯೆಂದು ಮಾಹಿತಿ ನೀಡಿದರು.
ಡಿಮ್ಹಾನ್ಸ್ ಸಂಸ್ಥೆಯಿಂದ ಒದಗಿಸಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಕಾರ್ಯಕ್ರಮಕ್ಕೆ ಹಾಜರಾದ ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ಮಾಹಿತಿಯನ್ನು ಒದಗಿಸಲಾಯಿತು. ಕೆಲವು ರೋಗಿಗಳು ಸ್ಕೀಜೋಫ್ರೀನಿಯಾ ಕಾಯಿಲೆ ಮತ್ತು ಇತರ ಮಾನಸಿಕ ಕಾಯಿಲೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಮನೋವೈದ್ಯರಿಗೆ ಕೇಳಿ ಉತ್ತರಗಳನ್ನು ಪಡೆದುಕೊಂಡರು.
ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಅನಂತರಾಮು ಬಿ.ಜಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಿಬ್ಬಂದಿಗಳಾದ ಡಾ.ಸತೀಶ್ ಕೌಜಲಗಿ, ಅಶೋಕ ಕೋರಿ, ಪ್ರಶಾಂತ ಪಾಟೀಲ, ಓಬಾ ನಾಯ್ಕ್, ಶ್ರೀದೇವಿ ಬೀರಾದಾರ ಇವರುಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಂ.ಫೀಲ್ ಇನ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ ವಿಭಾಗ ವಿದ್ಯಾರ್ಥಿಗಳಾದ ರಾಕೇಶ್, ಅಕ್ಷತಾ ತೋಟಗೇರ, ಕಾವೇರಿ ಕಿತ್ತೂರು, ವಿನೋದಾ ಹಿರೆಮಠ, ಯತೀಶ್ ಭಾರದ್ವಾಜ್ ಮತ್ತು ಟಿಲಿಮಾನಸ್ ತಂಡದ ಆಶಾ ಮೇಟಿ ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿವಿಧ ಸ್ಥಳಗಳಿಂದ ಬಂದಂತಹ ರೋಗಿಗಳು ಮತ್ತು ಅವರ ಆರೈಕಾದಾರರು ಇದ್ದರು.