
ಬಳ್ಳಾರಿ,ಮೇ 26: ವ್ಯಕ್ತಿಯಲ್ಲಿ ಪದೇ ಪದೇ ಬರುವ ತೀವ್ರತರ ಸಂಕಷ್ಟಗಳಿಗೆ ಅವನು ಸಿಲುಕಿದಾಗ ಮಾನಸಿಕ ಕಾಯಿಲೆಗಳಲ್ಲಿಯೇ ತೀವ್ರ ಸ್ವರೂಪವಾದ ಸ್ಕಿಜೋಪ್ರೇನಿಯ ಖಾಯಿಲೆಯು ಬರುವ ಸಾಧ್ಯತೆಯಿದ್ದು, ಆರಂಭದಲ್ಲಿಯೇ ರೋಗಿಯ ಮನಃಸ್ಥಿತಿಗೆ ಅನುಸಾರವಾಗಿ ಕುಟುಂಬದ ಸದಸ್ಯರ ನೆರವಿನಿಂದ ಚಿಕಿತ್ಸೆ ನೀಡಿದರೆ ಖಾಯಿಲೆ ಬೇಗ ವಾಸಿಯಾಗಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಡಿಯಲ್ಲಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಇವರ ಸಹಯೋಗದಲ್ಲಿ ವಿಶ್ವ ಸ್ಕಿಜೋಪ್ರೇನಿಯ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಸ್ಕಿಜೋಫ್ರೇನಿಯ ರೋಗಿಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಅಪಾಯ ಎಂಬ ನಂಬಿಕೆ ಇತ್ತು. ಆದರೆ ಕಳೆದ 30 ವರ್ಷಗಳಿಂದ ಈಚೆಗೆ ವೈದ್ಯಕೀಯ ಕ್ಷೇತ್ರದಲ್ಲಾದ ಸಂಶೋದನೆ ಹಾಗೂ ಬದಲಾದ ಚಿಕಿತ್ಸೆ ವಿಧಾನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಮಾತನಾಡಿ, ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯ ತರುಣರಲ್ಲ್ಲಿ ಗ್ರಾಮೀಣ-ಪಟ್ಟಣ, ಬಡತನ-ಶ್ರೀಮಂತಿಕೆ ಎಂಬ ಬೇಧಬಾವವಿಲ್ಲದೇ ಎಲ್ಲಿರಿಗೂ ಬರಬಹುದಾದ ಈ ಖಾಯಿಲೆಯು ವ್ಯಕ್ತಿಯ ಮನಸ್ಸಿನ ಕ್ರಿಯೆಗಳಲ್ಲಿ ಆಲೋಚನೆ, ಭಾವನೆಗಳನ್ನು ಹಾಗೂ ಪಂಚೇಂದ್ರಿಯಗಳ ಮೂಲಕ ತನ್ನ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲಾಗದ ಪರಿಸ್ಥಿತಿಗೆ ಹೋಗುತ್ತಾನೆ.
ಮಾತ್ರೆ ಮತ್ತು ಚುಚ್ಚು ಮದ್ದು ರೂಪದಲ್ಲಿ ಔಷದಿ ಲಭ್ಯವಿದ್ದು, ಖಾಯಿಲೆ ಕಾಣಿಸಿಕೊಂಡ ಕೆಲವೇ ವಾರದೊಳಗೆ ಔಷದೋಪಚಾರ ಪ್ರಾರಂಭಿಸಿದರೆ ಬೇಗ ಹತೋಟಿಗೆ ಬರುತ್ತದೆ ಎಂದು ತಿಳಿಸಿದರು.
ಈಗಾಗಲೇ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದಿಂದ ಮನೋಚೈತನ್ಯ ಕಾಯ್ದೆ ಕಾರ್ಯಕ್ರಮದಡಿಯಲ್ಲಿ ಪ್ರತಿ ಮಂಗಳವಾರ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣೆ ಏರ್ಪಡಿಸಿ, ರೋಗಿಗಳಿಗೆ ಆತ್ಮಹತ್ಯೆ ಸ್ಥೈರ್ಯ ತುಂಬುವುದರ ಜೊತೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ಕಳೆದ ವರ್ಷ 3,180 ರೋಗಿಗಳ ತಪಾಸಣೆ ಮಾಡಲಾಗಿದ್ದು, 388 ಬುದ್ದಿಮಾಂದ್ಯರಿಗೆ ಹಾಗೂ 150 ಮಾನಸಿಕ ಅಸ್ವಸ್ಥರಿಗೆ ವಿಶೇಷ ಗುರುತಿನ ಚೀಟಿ(ಯುಡಿಐಡಿ) ಒದಗಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಒದಗಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ ಬಿ.ಚವ್ಹಾನ್, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಪೂರ್ಣಿಮ.ಎಸ್.ಕಟ್ಟಿಮನಿ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಆರ್.ಅನೀಲ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಇಂದ್ರಾಣಿ, ಮಾನಸಿಕ ತಜ್ಞೆ ಡಾ.ಭುವನೇಶ್ವರಿ ದೇವಿ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಈಶ್ವರ್ ದಾಸಪ್ಪನವರ್, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಶಾಂತಮ್ಮ ಹಾಗೂ ಶಾಂತಕುಮಾರ್, ಕಾವ್ಯ.ಕೆ.ಪಿ, ರಂಜಿತ.ಜಿ, ಅಬ್ದುಲ್ಲಾ.ಡಿ, ನಿರಂಜನ, ರಮೇಶ ಬಾಬು, ಮಹೇಶ್, ಗುಲಾಮ್, ನಭಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಾಥಾದಲ್ಲಿ ವಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಶಿಕ್ಷಣಾಥಿಗಳು ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ನೀಡಿದರು.