
ಕೋಲಾರ, ಮೇ ೨೬- ದೈಹಿಕ ಆರೋಗ್ಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ಸಮಾಜವು ಮಾನಸಿಕ ಆರೋಗ್ಯಕ್ಕೆ ನೀಡುವುದಿಲ್ಲ ಎಂದು ಡಾ. ಜಗದೀಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸ್ಕಿಜೋಫ್ರೀನಿಯಾ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದಲ್ಲಿ ತನ್ನ ಭಾವನೆ, ಆಲೋಚನೆ ಹಾಗೂ ವರ್ತನೆಗಳಲ್ಲಿ ವ್ಯತ್ಯಾಸವಾದಾಗ ಅದನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾನೆ. ಹಾಗೇ ವ್ಯಕ್ತಪಡಿಸಿದರೆ ಎಲ್ಲಿ ತನಗೆ ಹುಚ್ಚ ಎಂಬ ಹಣೆಪಟ್ಟಿ ಕಟ್ಟಿ ತನ್ನನ್ನು ಕೀಳಾಗಿ ಹಾಗೂ ತಾರತಮ್ಯತೆಯಿಂದ ನೋಡಬಹುದು ಎಂದು ತನ್ನ ಮಾನಸಿಕ ಸಮಸ್ಯೆಯನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಉಲ್ಬಣವಾದಾಗ ಮನೆಯವರು ಭೂತ ಪ್ರೇತ ಅಥವಾ ದೆವ್ವದ ಕಾಟವೆಂದು ಅಥವಾ ಮಾಟ ಮಂತ್ರದ ಪ್ರಯೋಗವಿರಬಹುದೆಂದು ತಿಳಿಯುತ್ತಾರೆ ಎಂದು ಹೇಳಿದರು.
೨೦೨೩ ಮೇ ೨೪ ರಿಂದ ೩೦ ರವರೆಗೆ ಸಪ್ತಾಹ ನಡೆಯಲಿದ್ದು, ಸ್ಕಿಜೋಫ್ರೀನಿಯಾ ರೋಗಿಗಳನ್ನು ಮನೆಯಲ್ಲಿ ಇಟ್ಟು ಕೊಳ್ಳುವವರು ಅಪಾಯಕ್ಕೆ ಒಳಗಾಗುತ್ತಾರೆ ಎಂದು ಎಲ್ಲರೂ ಹೇಳುವ ಕಾಲವಿತು. ಅಂತಹ ರೋಗಿಗಳನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ ಆತನನ್ನು ಜೀವನಪರ್ಯಂತ ಅಲ್ಲೇ ಇರಬೇಕು ಎನ್ನುತ್ತಿದ್ದರು. ಈ ಕಾಯಿಲೆ ವ್ಯಕ್ತಿಯನ್ನು ಸಾಯುವವರೆಗೆ ಕಾಡುತ್ತದೆ ಎಂದೂ ನಂಬಲಾಗುತ್ತಿತ್ತು. ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ, ಪರಿಣಾಮಕಾರಿ ಹಾಗೂ ಸರಳ ಔಷಧಿಗಳ ಆವಿಷರದಿಂದ ರೋಗಿಗಳನ್ನು ಆಸ್ಪತ್ರೆಗೆ ಸೇರಿಸದೆ, ಅವರನ್ನು ಮನೆಯಲ್ಲೇ ಇಟ್ಟು, ಮನೆಯವರ ನೆರವಿನಿಂದ ಚಿಕಿತ್ಸೆ ಪಡೆದರೆ ಕಾಯಿಲೆ ಬೇಗ ವಾಸಿಯಾಗುವುದಲ್ಲದೆ ಮತ್ತೆ ಬರುವ ಸಂಭವ ಕಡಿಮೆಯಾಗುತ್ತದೆ. ರೋಗಿ ಪರಾವಲಂಬಿಯಾಗದೆ, ಉದ್ಯೋಗವಾಗಿ ಉಪಯುಕ್ತ ಪ್ರಜೆಯಾಗಿ ಬಾಳಲು ಒತ್ತಾಸೆ ನೀಡುತ್ತದೆ ಎಂದು ಅಧ್ಯಯನಗಳಿಂದ ಸ್ಪಷವಾಗಿದೆ. ಆದ್ದರಿಂದ ಸ್ಕಿಜೋಫ್ರೀನಿಯಾ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲೇ ಚಿಕಿತ್ಸೆ ನಡೆಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ಖಾಸಗಿ ಚಿಕಿತ್ಸಾಲಯಗಳ ಸಾಧಾರಣ ವೈದ್ಯರ ನೆರವಿನಿಂದಲೇ ಚಿಕಿತ್ಸೆ ಮುಂದುವರೆಸುವುದು ಈಗ ಜನಪ್ರಿಯವಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ|| ಎನ್.ಸಿ.ನಾರಾಯಣಸ್ವಾಮಿ ಅವರು ಮಾತನಾಡಿ ಸ್ಕಿಜೋಫ್ರೀನಿಯಾ ಕಾಯಿಲೆಯಲ್ಲಿ ಮನಸ್ಸಿನ ಕ್ರಿಯೆಗಳಲ್ಲಿ ಮುಖ್ಯವಾಗಿ ಆಲೋಚನೆ, ಭಾವನೆಗಳು ಮತ್ತು ಪಂಚೇಂದ್ರಿಯಗಳ ಮೂಲಕ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಸಂವೇದನಾ ಕ್ರಿಯೆ ಏರುಪೇರಾಗುತ್ತದೆ ಎಂದು ಹೇಳಿದರು.
ಅಸ್ತವ್ಯಸ್ತ ಆಲೋಚನೆ : ಅಂದರೆ ಸ್ಕಿಜೋಫ್ರೀನಿಯಾ ರೋಗಿಯ ಆಲೋಚನೆ ಸ್ಪಷ್ಟವಾಗಿರುವುದಿಲ್ಲ, ತರ್ಕಬದ್ಧವಾಗಿರುವುದಿಲ್ಲ. ಅಸಂಬದ್ಧವಾಗಿರುತ್ತದೆ. ಆರ್ಥ ಹೀನವಾಗಿರುತ್ತದೆ. ವಿಚಿತ್ರವಾಗಿರುತ್ತದೆ. ಆತ ವ್ಯಕ್ತವಡಿಸುವ ನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ. ವಿನಾಕಾರಣ ಆತ ಸಂಶಯ ಪೀಡಿತನಾಗಬಹುದು.
ಭಾವನೆಗಳ ಏರುಪೇರು : ಜೋಸ್ಪಿನಿಯಾ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿಗೆ ವಿಪರೀತ ಕೋಪ, ದುಃಖ, ಸಂತೋಷ ವಿನಾಕಾರಣ ನಗುವುದು, ಅಳುವುದು ಅಥವಾ ಯಾವುದೇ ಭಾವನೆ ತೋರಿಸದ ಮೂಕನಾಗಿರಬಹುದು, ಅಸಹಜ ಹಾಗೂ ವಿಚಿತ್ರ ಅನುಭವಗಳು: ಸ್ಕಿಜೋಫ್ರೀನಿಯಾ ರೋಗಿಯು ಭ್ರಮಾಧೀನವಾಗಿರುತ್ತಾನೆ. ಕಣ್ಣು ನೋಡುವುದೊಂದಾದರೆ, ಆತ ಅರ್ಥಮಾಡಿಕೊಳ್ಳುವುದು ಇನ್ನೊಂದಾಗುತ್ತದೆ. ಆತನ ಪ್ರಜ್ಞಾಸ್ಥಿತಿ ನೂರಕ್ಕೆ ನೂರು ಸರಿ ಇದ್ದರೂ ಹಗಲಿನಲ್ಲೂ ಹಗ್ಗವನ್ನು ಕಂಡು ಹಾವೆಂದು ಭೀತನಾಗಬಹುದು ನೆರಳನ್ನು ಕಂಡು ಭೂತ ಅಥವಾ ಕಳ್ಳ ಎಂದು ಹೇಳಬಹುದು ಹಾಗೆಯೇ ಕೇಳಿದ ಧ್ವನಿಗಳನ್ನು ಗ್ರಹಿಸಿದ ವಾಸನೆಯನ್ನು ತಪ್ಪು ತಪ್ಪಾಗಿ ವಿಶ್ಲೇಷಿಸುತ್ತಾನೆ. ದೈಹಿಕ ಕ್ರಿಯೆಗಳ ಏರುಪೇರು : ರೋಗಿಯ ಹಸಿವು ಮತ್ತು ಆಹಾರ ಸೇವನೆ ಅಸ್ತವ್ಯಸ್ತವಾಗುತ್ತದೆ. ಮನಸ್ಸಿಗೆ ಬಂದರೆ ತಿನ್ನುವದು ಇಲ್ಲದಿದ್ದರೆ ದಿನಗಟ್ಟಲೆ ಉಪವಾಸವಿರಬಹುದು, ಯಾವ ವಸ್ತುವನ್ನು ತಿನ್ನಬೇಕು. ಯಾವುದನ್ನು ತಿನ್ನಬಾರದೆಂದು ಆತನಿಗೆ ಗೊತ್ತಾಗುವುದಿಲ್ಲ, ಈ ಎಲ್ಲಾ ರೋಗ ಚಿಹ್ನೆಗಳು ಪ್ರತಿಯೊಬ್ಬ ರೋಗಿಯಲ್ಲೂ ಇರದೆ ಇರಬಹುದು, ಸಾಮಾನ್ಯವಾಗಿ ಮಂಕುತನ- ಜಡತ್ವ, ಗಲಾಟೆ ಜಗೂ ಉದ್ರೇಕವು ಅಥವಾ ಅತಿ ಸಂಶಯ / ಅನುಮಾನ ಪ್ರವೃತ್ತಿ ಸ್ಥಿತಿ ಕಾಣುತ್ತದೆ.
ಸ್ಕಿಜೋಫ್ರೀನಿಯಾ ಯಾರಿಗೆ ಜಾಸ್ತಿ ಬರುವ ಸಂಭವ? ಇದು ಸಾಮಾನ್ಯವಾಗಿ ೧೫ ರಿಂದ ೨೫ ವರ್ಷ ವಯಸ್ಸಿನ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಪದೇ ಪದೇ ಬರುವ ತೀವ್ರ ಚರಬರ ಸಂಕಷ್ಟಗಳಿಗೆ ವ್ಯಕ್ತಿ ಸಿಲುಕಿದಾಗ ಕಾಯಿಲೆ ಬರಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐ.ಇ.ಸಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ನಾರಾಯಣಸ್ವಾಮಿ ಎ.ವಿ.ಮನೋವೈದ್ಯರಾದ ಡಾ|| ವಿಜೇತ ದಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.