ವಿಶ್ವ ಶ್ರವಣ ದಿನ ಆಚರಣೆ

ಧಾರವಾಡ, ಮಾ.4: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಶಿಕ್ಷಣ ಕೋಶ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ದೃಷ್ಠಿ ಪ್ಯಾರಾ ಮೆಡಿಕಲ್ ವಿಜ್ಞಾನ ವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ದೃಷ್ಠಿ ಪ್ಯಾರಾ ಮೆಡಿಕಲ್ ವಿಜ್ಞಾನ ವಿದ್ಯಾಲಯ ಧಾರವಾಡದಲ್ಲಿ ವಿಶ್ವ ಶ್ರವಣ ದಿನದ ಅಂಗವಾಗಿ ಕಾಲೇಜ್ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಬಿ. ನಿಂಬಣ್ಣವರ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಹಾಗೂ ಶ್ರವಣ ಆರೈಕೆ ಬಗ್ಗೆ ಮಾಹಿತಿಯುಳ್ಳ ಕರಪತ್ರ ಬಿಡುಗಡೆ ನೇರವೇರಿಸಿ ಕಿವಿ ಆರೈಕೆ, ಮುಂಜಾಗೃತಾ ಕ್ರಮ ಕೈಗೊಳ್ಳುವ ಬಗ್ಗೆ, ಬಾಲ್ಯದ ಶ್ರವಣ ಸೋಂಕುಗಳು, ಗರ್ಭಾವಸ್ಥೆಯಲ್ಲಿ ತಾಯಂದಿರಿಗೆ ಸಿಗದ ಸರಿಯಾದ ಆರೈಕೆ, ವೈದ್ಯರ ಸಲಹೆಯಿಲ್ಲದೆ ಬಳಸುವ ಔಷಧಿಗಳು ಅಥವಾ ಜೋರಾದ ಶಬ್ಧಗಳನ್ನು ತುಂಬಾ ಸಮಯ ಕೇಳುವುದರಿಂದ 0 ಯಿಂದ 14 ವರ್ಷದವರೆಗಿನ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ ಎಂದು ತಿಳಿಸಿದರು.

    ತಾಲೂಕಾ ಆರೋಗ್ಯ ಅಧಿಕಾರಿ ಡಾ. ತನುಜಾ ಕೆ.ಎನ್. ಅವರು ಈ ವರ್ಷದ ವಿಶ್ವ ಶ್ರವಣ ದಿನವನ್ನು ಎಲ್ಲರಿಗೂ ಕಿವಿ ಮತ್ತು ಶ್ರವಣ ಆರೈಕೆ ಸೇವೆಗಳು ಬನ್ನಿ ವಾಸ್ತವಗೊಳಿಸೋಣ ಎಂಬ ಘೋಷವಾಕ್ಯ ಹೇಳುವುದರ ಮುಖಾಂತರ ಕಿವಿಯ ಬಗ್ಗೆ ಮುಂಜಾಗೃತಾ ಕ್ರಮ ವಹಿಸುವುದು, ಜೋರಾದ ಶಬ್ಧಗಳಾದ ಟಿ.ವಿ. ರೇಡಿಯೋ, ಇಯರ್‍ಫೋನ್ ಉಪಕರಣಗಳು ಹಾಗೂ ಇತರೆ ಜೋರಾದ ಶಬ್ಧಗಳಿಂದ ದೂರವಿರಿ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ, ಕಿವಿ ಸೋರುವಿಕೆ, ಮರುಕಳಿಸುವ ನೋವು ಅಥವಾ ರಕ್ತ ಸ್ರಾವ, ಗಂಭೀರ ರೋಗವಾಗಿರಬಹುದು. ಆರಂಭದಲ್ಲಿಯೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಶ್ರವಣದೋಷ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಮಾಡಿಸಿಕೊಳ್ಳಿ ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.
 ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರೇವಯ್ಯ ಹಿರೇಮಠ ಅವರು ಮಾತನಾಡಿ, ಕಿವಿ ಆರೈಕೆ ಬಗ್ಗೆ ಕಾಳಜಿ ವಹಿಸುವುದು ಮತ್ತು ದೊಡ್ಡ ಶಬ್ಧಗಳಿಂದ ಶ್ರವಣ ನಷ್ಟವನ್ನು ತಡೆಯಬಹುದು ಎಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಹೇಳಿದರು.
   ಈ ಕಾರ್ಯಕ್ರಮದಲಿ ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ಬಿ.ಆರ್. ಪಾತ್ರೋಟ ಹಾಜರಿದ್ದರು. ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಕೆ.ಚವ್ಹಾಣ ನಿರೂಪಿಸಿದರು. ಬಿ.ಹೆಚ್.ಇ.ಒ ರೇಖಾ ಬಾಡಗಿ   ಸ್ವಾಗತಿಸಿ, ವಂದಿಸಿದರು.