ವಿಶ್ವ ಶಾಂತಿ ದಿನಾಚರಣೆ

ಕಲಬುರಗಿ:ಸೆ.21: ಶಾಂತಿ ಯಾವತ್ತು ಸ್ವಯಂ ಪ್ರೇರಿತ ಮತ್ತು ವೈಯಕ್ತಿಕವಾಗಿರಬೇಕು, ಆಗ ಮಾತ್ರ ಜಗತ್ತಿನಾದ್ಯಂತ ಶಾಂತಿ ಹರಡುತ್ತದೆ. ಜಗತ್ತಿನಲ್ಲಿ ಶಾಂತಿ ಇದ್ದಾಗ ಮಾತ್ರ ಸಾಮಾಜಿಕ, ಭೌತಿಕ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಹಿಂದೆಂದಿಗಿಂತಲೂ ಇವತ್ತು ಜಗತ್ತಿನ ಶಾಂತಿ ವ್ಯವಸ್ಥೆ ಕಾಪಾಡುವುದು ಬಹಳ ಮುಖ್ಯವಾಗಿದೆ ಎಂದು ನಿವೃತ್ತ ಪ್ರೊಫೆಸರ್ ಟಿ ಗುರುಬಸಪ್ಪ ಅವರು ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ವಿಶ್ವಶಾಂತಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಆರ್ಥಿಕತೆ ಜಗತ್ತಿನ ಶಾಂತಿ ವ್ಯವಸ್ಥೆಯ ಮೇಲೆ ನಿರ್ಭರವಾಗಿದೆ. ಸಮಾಜದಲ್ಲಿ ಶಾಂತಿ ಬಹು ಮುಖ್ಯ ಪಾತ್ರವಹಿಸುತ್ತದೆ ಮತ್ತು ಮನುಷ್ಯನ ಎಲ್ಲಾ ಬೆಳವಣಿಗೆ ಶಾಂತಿ ಮಾರ್ಗದಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ವಿಶ್ವ ಯುದ್ಧ ಒಂದು ಮತ್ತು ಎರಡು ನಮಗೆ ಶಾಂತಿಯ ಪ್ರಾಮುಖ್ಯತೆ ತಿಳಿಸಿ ಕೊಟ್ಟಿದ್ದರು ಇಂದು ನಾವು ರಷ್ಯಾ ಮತ್ತು ಉಕ್ರೇನ್ ನಂಥ ದೇಶಗಳ ಮಧ್ಯ ಯುದ್ಧ ನಡೆಯುವುದು ಕಾಣುತ್ತೇವೆ. ಈ ಯುದ್ಧದ ಪರಿಣಾಮವಾಗಿ ಸಾವಿರಾರು ಜನರು ಮತ್ತು ಮಕ್ಕಳು ಸಾವನ್ನಪ್ಪುತ್ತಿರುವುದು ಮಾನವ ಕುಲಕ್ಕೆ ಒಂದು ಕಪ್ಪು ಚುಕ್ಕೆ ಮತ್ತು ಈ ಯುದ್ಧದಿಂದಾಗಿ ಎರಡು ದೇಶಗಳ ಮತ್ತು ಜಗತ್ತಿನ ಆರ್ಥಿಕ ವ್ಯವಸ್ಥೆಯು ಹಾಳಾಗಿರುವುದು ನಮಗೆ ಕಂಡುಬರುತ್ತವೆ. ಇದಾದರೂ ಸಹ ಮನುಷ್ಯ ಶಾಂತಿಯ ಮಹತ್ವ ಇನ್ನು ಅರಿತಿಲ್ಲವೆಂದು ನಮಗೆ ಅನಿಸುತ್ತದೆ ಎಂದು ಪ್ರೊಫೆಸರ್ ಟಿ ಗುರುಬಸಪ್ಪ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಬಿ. ಕೊಂಡ ಅವರು ಮಾತನಾಡಿ, ಸಮಾಜದ ಏಳಿಗೆಗಾಗಿ ಶಾಂತಿ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಇಂಗ್ಲಿಷ್ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ಅಶ್ವಿನಿ ಮಠ ಅವರು ಮುಖ್ಯ ಅತಿಥಿಗಳು ಹಾಗೂ ಸಭೆಯನ್ನು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ: ಜ್ಯೋತಿಪ್ರಕಾಶ್ ದೇಶಮುಖ್ ಪ್ರಾಸ್ತಾವಿಕ ಮಾತನಾಡಿ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವಿಶ್ವ ಶಾಂತಿ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಲೇಖನ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕಿಯರಾದ ಶ್ರೀಮತಿ ಸುಮನ್ ಯಾಳವರ್ ಅವರು ಸಭೆಗೆ ವಂದಿಸಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ: ಸವಿತಾ ಬಿ ಬೊಳಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಉಮಾ ರೇವೂರ್, ಡಾ. ನಾಗೇಂದ್ರ ಮಸೂತಿ, ಡಾ. ರಾಜೇಶ್ ಸಿದ್ದಣ್ಣ, ಡಾ.ವಿಶ್ವನಾಥ್ ದೇವರುಮನಿ, ಡಾ. ಮಹೇಶ್ ಗಂಗವಾರ್, ಡಾ. ಪ್ರೇಮ್ಚಂದ್ ಚೌಹಾಣ್, ಡಾ. ಚಂದ್ರಕಲಾ ಪಾಟೀಲ್, ಶಿವಲೀಲಾ ಧೋತ್ರೆ, ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೆತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ಕೋಮಲ್ ಚೌದ್ರಿ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಕುಮಾರಿ ಸಾಕ್ಷಿ ಪ್ರಾರ್ಥನೆ ಗೀತೆಯನ್ನು ಹಾಡಿದರು.