ವಿಶ್ವ ರಂಗಭೂಮಿ ದಿನಾಚರಣೆ

ಬಂಕಾಪುರ, ಏ 2: ಕಲೆ, ಕಲಾವಿದರನ್ನು ಆರಾಧಿಸಿ, ಪ್ರೋತ್ಸಾಹಿಸುವ ಹೃದಯ ಶ್ರೀಮಂತಿಕೆ ಹಿಂದಿನಿಂದಲೂ ಇಂದಿನವರೆಗೂ ಮುಂದುವರೆದುಕೊಂಡು ಬಂದಿರುವುದು ಈ ಸುಂಕದಕೇರಿ ಜನತೆಯಲ್ಲಿ ಎಂದು ಡಾ.ಆರ್.ಎಸ್.ಅರಳೆಲೆಮಠ ಹೇಳಿದರು.
ಪಟ್ಟಣದ ಸುಂಕದಕೇರಿ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದ ಬಯಲು ರಂಗ ಮಂದಿರದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅನಾದಿಕಾಲದಿಂದಲೂ ಬಂದ ಸಣ್ಣಾಟ, ದೊಡ್ಡಾಟಗಳು ದೇವಾನು ದೇವತೆಗಳ, ರಾಜ, ಮಹರಾಜರ ಇತಿಹಾಸವನ್ನು ಪ್ರಚುರ ಪಡೆಸುತ್ತಾ ಬರುತ್ತಿವೆ ಎಂದರು.
ಇಂದಿನ ಆದುನಿಕತೆಗೆ ಮಾರು ಹೋದ ಯುವ ಸಮೂಹ ಚಲನ ಚಿತ್ರಗಳಂತಹ ಫೇಸ್‍ಬುಕ್, ವ್ಯಾಟ್ಸಾಪ್, ಅಂತರ್‍ಜಾಲಕ್ಕೆ ಮಾರು ಹೋಗಿರುವುದು ವಿಷಾದದ ಸಂಗತಿಯಾಗಿದೆ. ದೊಡ್ಡಾಟ, ಸಣ್ಣಾಟ ಕಲೆಗಳು ರಾಜ ವೈಭವದ ಕಲೆಗಳಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಮೇಲಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಕಲಾವಿದ ಕೊಟ್ರೇಶ ಮಾಸ್ತರ ಬೆಳಗಲಿ ಮಾತನಾಡಿ, ಸಂಪಾದನೆಗೋಷ್ಕರ ಕಲಾವಿದರು ಕಲೆಯನ್ನು ಕರಗತ ಮಾಡಿಕೋಳ್ಳದೆ, ಆತ್ಮ ವಿನೋದಕ್ಕಾಗಿ ಕಲೆಯನ್ನು ಕರಗತ ಮಾಡಿಕೋಂಡು ನಾಟಕದಮೂಲಕ ಅಭಿನಯಿಸಿ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವಲ್ಲಿ ಕಲಾವಿದರ ಪಾತ್ರ ಪ್ರಮುಖವಾಗಿದೆ ಎಂದರು.
ಕಲಾವಿದ ಬಸವರಾಜ ಶಿಗ್ಗಾಂವ ಮಾತನಾಡಿ, ದೊಡ್ಡಾಟ ಕಲೆಯನ್ನು 15 ಕ್ಕೀಂತಲೂ ಅಧಿಕ ರಾಜ್ಯಗಳಿಗೆ ತೆರಳಿ, ಪ್ರದರ್ಶಿಸುವಮೂಲಕ ತಾಲೂಕಿನ ಕೀರ್ತಿ ಪತಾಕೆಯನ್ನು ಇತರೆ ರಾಜ್ಯಗಳಲ್ಲಿ ಪಸರಿಸಿರುವ ಕೀರ್ತಿ ತಾಲೂಕಿನ ಕಲಾವಿದರಿಗೆ ಸಲ್ಲುತ್ತದೆ ಎಂದರು.
ಕಲಾವಿದ ಶಂಕರ ಅರ್ಕಸಾಲಿ ಮಾತನಾಡಿ, ಬಯಲಾಟ ಕಲೆ ಪ್ರಾಚೀನ ಕಲೆಯಾಗಿದ್ದು, ಆ ಕಲೆ ಮತ್ತೆ ಪುನರುತ್ಥಾನಗೊಳ್ಳುವ ಅವಶ್ಯವಾಗಿದೆ. 10ನೇ ಶತಮಾನದಿಂದ ಬಯಲಾಟ ಕಲೆಗಳು ಸಾರ್ವಜನಿಕರ ಮನರಂಜನೆಗೆ ಪ್ರದರ್ಶಿಸಲ್ಪಡುತ್ತಿದ್ದವು. ಅಂತಹ ಕಲೆಯನ್ನು ತಲೆ, ತಲಾಂತರದಿಂದ 21 ನೇ ಶತಮಾನದವರೆಗೂ ಮುಂದುವರೆಸಿಕೋಂಡು ಬಂದ ಕಲಾವಿದರಿಗೆ ಸರಕಾರ ಮಾಸಿಕ ಗೌರವ ದನ ನೀಡಿ, ಪ್ರೋತ್ಸಾಹಿಸುವ ಅವಶ್ಯವಾಗಿದೆ ಎಂದರು.
ಸಭೆಯಲ್ಲಿ ಕಲಾವಿದರಾದ ಆಶುಕವಿ ಜಗದೀಶ ಹುರಳಿ, ಶಂಕರ ಅರ್ಕಸಾಲಿ, ಬಸವರಾಜ ಶಿಗ್ಗಾಂವ, ಕೊಟ್ಟೆಶ ಮಾಸ್ತರ ಬೆಳಗಲಿ ಯವರನ್ನು ಸಂಘಟಿಕರು ಸನ್ಮಾನಿಸಿದರು. ನಂತರ ಥೇಟರ್ ಸಮೂದಾಯ ಕಲಾತಂಡ ಶಿವಮೊಗ್ಗ ಇವರಿಂದ ಮಹಾ ಭಾರತ ಚಕ್ರವ್ಯೂಹ ವೀರ ಅಭಿಮನ್ಯೂ ಕಥಾ ಪ್ರಸಂಗ ನಾಟಕ ಪ್ರದರ್ಶನಗೊಂಡು ಜನಮನ ಗಮನ ಸಳೆಯಿತು.
ಮುಖಂಡರಾದ ಬಸವರಾಜ ನಾರಾಯಣಪುರ, ಶಿವು ಅಂಗಡಿ, ರಾಮಕೃಷ್ಣ ಆಲದಕಟ್ಟಿ, ಮಂಜುನಾಥ ಕೂಲಿ, ಮಹೇಶ ಪುಕಾಳೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.