ವಿಶ್ವ ಮಧುಮೇಹ ದಿನಾಚರಣೆ ಸೈಕಲ್ ಜಾಥಾದಿಂದ ಜನರಲ್ಲಿ ಜಾಗೃತಿ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.14: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಗರದಲ್ಲಿಂದು ಮೋಡ ಮುಸಿಕಿದ, ಚಟಪಟ ಮಳೆ ಹನಿಯ ಮಧ್ಯೆ ಬೆಳ್ಳಂ ಬೆಳಗ್ಗೆ ಸೈಕಲ್ ತುಳಿಯುತ್ತ ರಸ್ತೆಗಳಲ್ಲಿ ನಿಂತು ಜನರಿಗೆ ಮಧುಮೇಹ ಕಾಯಿಲೆ, ಅದಕ್ಕೆ  ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಅನುಸರಿಸಬೇಕಾದ ವಿಧಾನಗಳ ಕುರಿತು ವೈದ್ಯರು ಜಾಗೃತಿ ಮೂಡಿಸಿದರು.
ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಘಟಕ, ಹಾಗೂ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಸೈಕಲ್ ಱ್ಯಾಲಿ ಹಮ್ಮಿಕೊಂಡಿತ್ತು.
ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜರ್ನಾಧನ ಅವರು ಱ್ಯಾಲಿಗೆ ಚಾಲನೆ ನೀಡಿ, ಸಕ್ಕರೆ ಕಾಯಿಲೆ ಈಗ ಸರ್ವೇ ಸಾಮಾನ್ಯವಾಗಿದೆ. ಇದರಿಂದ ಹೆದರಬೇಕಿಲ್ಲ, ಆದರೆ ಜಾಗೃತಿ ಮುಖ್ಯ ಡಯಟ್ ಮತ್ತು ನಿತ್ಯ ದೇಹ ದಂ‌ಡನೆ ಅಂದರೆ ಯೋಗ, ವ್ಯಾಯಾಮ, ವಾಕಿಂಗ್ ಮೂಲಕ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದರ ಜೊತೆಗೆ ದೂರ ಸಹ ಮಾಡಿಕೊಳ್ಳಬಹುದು ಎಂದು ಹೇಳಿದರು.
ಸಕ್ಕರೆ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಸೈಕಲ್‍ಗಳಿಗೆ ಕಟ್ಟಿಕೊಂಡು ಹೊರಟ ಱ್ಯಾಲಿ. ಇಂದಿರಾ ಸರ್ಕಲ್, ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್‍ಪೇಟೆ,  ತೇರುಬೀದಿ, ಜೈನ್ ಮಾರುಕಟ್ಟೆ, ಗವಿಯಪ್ಪ ವೃತ್ತ, ರಂಗ ಮಂದಿರ, ಕೌಲ್ ಬಜಾರ್, ಬೆಳಗಲ್ಲು ಕ್ರಾಸ್, ಎರಡನೇ ಗೇಟ್, ಹೊಸಪೇಟೆ ರಸ್ತೆ ಮೂಲಕ ಐಎಂಎ ಸಭಾಂಗಣಕ್ಕೆ ಬಂದು ತಲುಪಿತು.
ಜಾಥಾ ತೆರಳಿದ ಕಡೆಗಳಲ್ಲಿ ಅಲ್ಲಲ್ಲಿ ಜನರಿಗೆ ಗುಲಾಬಿ ಹೂ ನೀಡಿ, ಕರ ಪತ್ರಗಳನ್ನು ಹಂಚಿ ಮಧೂ ಮೇಹ ಕಾಯಿಲೆಯ ಬಗ್ಗೆ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರವಿಶಂಕರ್ ಮತ್ತು ಡಾ.ಸೋಮನಾಥ್ ಮಾತನಾಡಿ ಮಧುಮೇಹ ನಿಯಂತ್ರಣಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ಒಟ್ಟಾರೆ ಜೀವನಶೈಲಿ ಬದಲಿಸಿಕೊಳ್ಳುವುದು ಅಷ್ಟೇ ಮುಖ್ಯ. ವ್ಯಾಯಾಮವನ್ನು ಆರಂಭಿಸುವುದು ಜೀವನಶೈಲಿ ಬದಲಾವಣೆಯ ಮೊದಲ ಹಂತ. ಊಟ, ನಿದ್ದೆ, ಕೆಲಸದ ಜೊತೆಗೆ ನಿರಂತರ ದೈಹಿಕ ಚಟುವಟಿಕೆಯಿಂದ ಮಾತ್ರ ನಿಯಂತ್ರಣ ಸಾಧ್ಯ.  ಮಧುಮೇಹಕ್ಕೆ ಜೀವನಶೈಲಿಯ ಏರುಪೇರಿನ ಜೊತೆಗೆ ವಂಶವಾಹಿ ಕಾರಣಗಳಿರುವುದರಿಂದ. ಕುಟುಂಬದ ಎಲ್ಲ ಸದಸ್ಯರು ಈ ಬಗ್ಗೆ ಜಾಗೃತಿ ಅವಶ್ಯ ಎಂದು ತಿಳಿಸಿದರು.
ಬಳ್ಳಾರಿ ಸೈಕ್ಲಿಂಗ್ ಅಸೋಸಿಯೇಷನ್ ಮುಖ್ಯಸ್ಥ ಡಾ.ಬಿ.ಕೆ. ಸುಂದರ್ ಅವರು ಮಾತನಾಡಿ ಪ್ರತಿ ದಿನ ಕನಿಷ್ಠ ಅರ್ಧ ಗಂಟೆ ಬಿರುಸಿನ ನಡಿಗೆ ಕಡ್ಡಾಯ. ಅದರೊಂದಿಗೆ ಓಟ, ಈಜು, ಜಿಮ್‍ನಲ್ಲಿ ವ್ಯಾಯಾಮದಂತಹ ಚಟುವಟಿಕೆ ನಡೆಸಿದರೆ ಇನ್ನೂ ಒಳ್ಳೆಯದು. ಮನೆ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು. ಚಿಕ್ಕಪುಟ್ಟ ಕೆಲಸಗಳಿಗೆ ನಡೆದು ಹೋಗುವುದನ್ನು ಆರಂಭಿಸಬೇಕು. ಬೈಸಿಕಲ್ ತುಳಿಯಬೇಕು. ಪ್ರೋಟಿನ್ ಅಂಶ ಹೆಚ್ಚಿರುವ ಆಹಾರವನ್ನು ಸೇರಿಸಬೇಕು ಎಂದು ಹೇಳೀದರು
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಶ್ರೀಕಾಂತ್, ಡಾ.ಗೋವರ್ಧನ್, ಎಸ್‍ಜೆವಿ ಭರತ್, ಎಸ್.ಕೆ.ಅಜಯ್, ತಿಪ್ಪಾಶರೆಡ್ಡಿ, ಡಾ.ಗಡ್ಡಿ ದಿವಾಕರ್, ಡಾ ಕಲ್ಪನಾ ಕುಡುಪಲಿ, ಡಾ.ಜಯಶ್ರೀ ಸೋಮನಾಥ್, ಡಾ ಉಮಾಮಹೇಶ್ವರಿ, ಡಾ.ರೇಣುಕಾ ಮಂಜುನಾಥ್, ಭಾರತಿ, ಲಲಿತ ಬಳ್ಳಾರಿ ಸೈಕಲ್ ಕ್ಲಬ್ ಸದಸ್ಯರಾದ  ಪ್ರಶಾಂತ್ ಸರಡಾ, ವಿನೋದ್, ಸಂದೀಪ್ ಶರ್ಮ, ನರಸಿಂಹ್, 
ಮೊದಲಾದವರು ಪಾಲ್ಗೊಂಡಿದ್ದರು.
ಱ್ಯಾಲಿಯ ಉದ್ಘಾಟನೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಎನ್ ಬಸಾರೆಡ್ಡಿ, ಡಾ.ಮರಿಯಾಂಬಿ, ಡಾ. ನಿಜಾಮುದ್ದೀನ್, ಆರೋಗ್ಯ  ಶಿಕ್ಷಣಾಧಿಕಾರಿ ಈಶ್ವರ ದಾನಪ್ಪನವರ್ ಮೊದಲಾದವರು ಉಪಸ್ಥಿತರಿದ್ದರು.