ವಿಶ್ವ ಭ್ರಾತೃತ್ವವನ್ನು ಸಾರಿದ ಮೇರು ದಾರ್ಶನಿಕ ರವೀಂದ್ರನಾಥ ಟ್ಯಾಗೋರ್

ಕಲಬುರಗಿ:ಮೇ.8: ರವೀಂದ್ರನಾಥ ಟ್ಯಾಗೋರ ಅವರು ಸ್ವತಂತ್ರ ಮನೋಭಾವದ ಮೇರು ವ್ಯಕ್ತಿ. ಶಾಲಾ-ಕಾಲೇಜುಗಳಲ್ಲಿ ಶಿಕ್ಷಣವನ್ನು ಪಡೆಯದೆ, ಯಾವ ಪದವಿ, ಅರ್ಹತೆಯು ಇಲ್ಲದೆ ತಮ್ಮ ಅದ್ಭುತ ಸಾಹಿತ್ಯ ಸಾಧನೆಯಿಂದ ಭಾರತಕ್ಕೆ ಅಷ್ಟೆ ಅಲ್ಲದೇ ಇಡೀ ಏಷಿಯಾ ಖಂಡದಲ್ಲಿಯೇ ಪ್ರಥಮ ಬಾರಿಗೆ ನೋಬೆಲ್ ಪಾರಿತೋಷಕ ತಂದು ಕೊಡುವ ಮೂಲಕ ನಮ್ಮ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಟ್ಯಾಗೋರ್ ಅವರು ವಿಶ್ವ ಭ್ರಾತೃತ್ವವನ್ನು ಸಾರಿದ ಮೇರು ದಾರ್ಶನಿಕರಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ರವೀಂದ್ರನಾಥ ಟ್ಯಾಗೋರ್‍ರ 163ನೇ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಟ್ಯಾಗೋರ್ ಮೇರು ಕವಿ, ಆಧ್ಯಾತಿಕತೆಯ ಮಹಾನ ನಾಯಕ, ‘ವಿಶ್ವಭಾರತಿ’ ಶಿಕ್ಷಣ ಸಂಸ್ಥೆ ಸ್ಥಾಪಕ, ನಮ್ಮ ದೇಶದ ರಾಷ್ಟ್ರಗೀತೆ ರಚನಾಕಾರರಾಗಿದ್ದಾರೆ. ‘ಭಗ್ನ ಹೃದಯ’, ‘ಸಂಧ್ಯಾ ಸಂಗೀತ’, ‘ನಿರ್ಝರೇರ್ ಸ್ವಪ್ನಭಂಗ’, ‘ಪ್ರಭಾತ ಸಂಗೀತ’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶಿಕ್ಷಣದ ಕುರಿತು ಟ್ಯಾಗೋರರು ಸಾಕಷ್ಟು ಹೊಸ ಪರಿಕಲ್ಪನೆಗಳನ್ನು ನೀಡಿದ್ದಾರೆ. ಇವರದು ಪರಿಪೂರ್ಣ ಸ್ವಾತಂತ್ರಕ್ಕಾಗಿ ಹಂಬಲಿಸುವ, ಹೋರಾಡುವ ಮನೋಭಾವ ಆಗಿತ್ತು. ಅದಕ್ಕೆ ತಕ್ಕಂತೆ ಅವರ ಸ್ವರಾಜ್ಯದ ಕುರಿತಾದ ಚಿಂತನೆಗಳು ಕೂಡಾ ವಿಭಿನ್ನವಾಗಿದ್ದವು. ಸಾಂಪ್ರದಾಯಿಕ ಸಮಾಜವನ್ನು ಪುನರುಜ್ಜೀವನಗೊಳಿಸುವ ಕಾರ್ಯ ಮಾಡಿದ್ದು ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಲೇಖಕ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಟ್ಯಾಗೋರ ಅವರ ಪ್ರತಿಯೊಂದು ಕೃತಿಯು ಜೀವನವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ. ಟ್ಯಾಗೋರ ಅವರು ಸಾಮಾಜಿಕ ವ್ಯವಸ್ಥೆಯ ಸುಧಾರಣೆಗೆ ಹಾಗೂ ಶಿಕ್ಷಿತ ಸ್ವಯಂ ಸೇವಕರು ಹಳ್ಳಿಗಳಲ್ಲಿ ಸಕ್ರಿಯವಾಗಿ ವಾಸಿಸಬೇಕು ಎಂಬ ವಿಚಾರವನ್ನು ಮಂಡಿಸಿದರು. ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಸಾಮಾಜಿಕ ಬದಲಾವಣೆಯೇ ಈ ದೇಶದ ಪ್ರಥಮ ಅಗತ್ಯವೆಂದು ಪ್ರತಿಪಾದಿಸಿರುವುದು ಪ್ರಸ್ತುತವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಂಪ್ಯೂಟರ ಶಿಕ್ಷಕಿ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪ್ರಮುಖರಾದ ಮಲ್ಲಿಕಾರ್ಜುನ ಎಂ. ಅಭಿಷೇಕ ಎನ್.ವೈ. ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.