ವಿಶ್ವ ಬೈಸಿಕಲ್ ದಿನಾಚರಣೆ ಜಿಮ್ಸ್ ವಿದ್ಯಾರ್ಥಿಗಳಿಂದ ಸೈಕಲ್ ರ್ಯಾಲಿ

ಕಲಬುರಗಿ,ಜೂ.3: ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಗುಲಬರ್ಗಾ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆಯಿಂದ ಶನಿವಾರ ಕಲಬುರಗಿ ನಗರದಲ್ಲಿ ಸೈಕಲ್ ರ್ಯಾಲಿ ಆಯೋಜಿಸಲಾಗಿತ್ತು.
ಜಿಮ್ಸ್ ನಿಂದ ಆರಂಭಗೊಂಡ ರ್ಯಾಲಿ ಖರ್ಗೆ ಪೆಟ್ರೋಲ್, ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು, ಗುಲಬರ್ಗಾ ವಿ.ವಿ., ಬುದ್ದ ವಿಹಾರ ಮಾರ್ಗವಾಗಿ 14 ಕಿ.ಮೀ ಸಂಚರಿಸಿ ಮರಳಿ ಜಿಮ್ಸ್ ಗೆ ಬಂದು ಕೊನೆಗೊಂಡಿತು. ರ್ಯಾಲಿಯಲ್ಲಿ ಸಂಸ್ಥೆಯ ಸುಮಾರು 60 ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಿಬ್ಬಂದಿಗಳು ಸೈಕಲ್ ತುಳಿಯುವ ಮೂಲಕ ಪರಿಸರ ಕಾಳಜಿ ಮೂಡಿಸಲು ಪ್ರಯತ್ನಿಸಿದರು.
ಜಿಮ್ಸ್ ಆವರಣದಲ್ಲಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ಡಾ.ಕವಿತಾ ಪಾಟೀಲ, ಅವರು, ಸೈಕಲ್ ಸರಳ, ಕೈಗೆಟುಕುವ, ಸ್ವಚ್ಛ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ಸುಸ್ಥಿರ ಸಾರಿಗೆ ಸಾಧನವಾಗಿದೆ. ಶಾರೀರಿಕವಾಗಿ ಆರೋಗ್ಯವಾಗಿರಲು ಸೈಕಲ್ ಸವಾರಿ ಉತ್ತಮ ನಡವಳಿಕೆಯಾಗಿದೆ ಎಂದಲ್ಲದೆ ಬೈಸೈಕಲ್ ಬಳಕೆಯ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ಒತ್ತಿ ಹೇಳಿದರು.
ಇದೇ ಸಂದರ್ಭದಲ್ಲಿ ಫಿಟ್ ನೆಸ್ ಮತ್ತು ವಿವಿಧ ದೈಹಿಕ ಚಟುವಟಿಕೆಗಳ ಕುರಿತು ಸಹ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ರ್ಯಾಲಿಯಲ್ಲಿ ಸಂಸ್ಥೆಯ ವಿವಿಧ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರು, ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.