ವಿಶ್ವ ಬಿದುರಿನ ದಿನ

ಮಾನವ ಈ ಭೂಮಿಗೆ ಬಿದ್ದಾಕ್ಷಣ ಬಿದಿರಿನ ತೊಟ್ಟಿಲೇ ಮೊದಲ ಆಸರೆ. ಹಾಗೆ ಇಹಲೋಕದ ಪಯಣಗಳನ್ನು ಮುಗಿಸಿದ ಮೇಲೆ ಪರಲೋಕ ಯಾತ್ರೆಗೆ ಪ್ರಯಾಣಿಸುವುದು ಬಿದಿರಿನ ಚಟ್ಟದ ಮೇಲೆ ಎಂತಹ ವಿಪರ್ಯಾಸ. ಈ ಜನನ ಮರಣದ ನಡುವೆ ಮನುಷ್ಯ ಜೀವನದ ಅವಿರ್ಭಾವ ಅಂಗ ಈ ಬಿದಿರು ಎಂದರೆ ಅತಿಶಯೋಕ್ತಿಯಲ್ಲ.

ಬಿದಿರು ಸಸ್ಯಶಾಸ್ತ್ರದಲ್ಲಿ ಬ್ಯಾಂಬೂಸಾಯ್ಡಿಯೇ ಎಂಬ ಮುಖ್ಯಪ್ರಭೇದಕ್ಕೆ ಸೇರಿದೆ. ಇದರಲ್ಲಿ ನಾನಾ ಬಗೆಯ ಉಪಪ್ರಭೇದಗಳು ಇವೆ. ಇವುಗಳ ಉಪಯೋಗಗಳ ಪಟ್ಟಿ ನಿರಂತರ. ಪ್ರಪಂಚದ ಎಲ್ಲಾ ಸಸ್ಯ ಪ್ರಭೇದಗಳಲ್ಲಿ ಬಿದಿರು ಅತ್ಯಂತ ವೇಗವಾಗಿ ಬೆಳೆಯುವ ಸಸ್ಯ ಎಂದು ಹೆಸರು ಮಾಡಿದೆ. ಇದು ಪ್ರಪಂಚದ ಅತಿದೊಡ್ಡ ಹುಲ್ಲು ಎಂಬ ಖ್ಯಾತಿ ಇದಕ್ಕಿದೆ. ಆನೆಗಳಿಗೆ ಬಿದಿರು ಬಲು ಪ್ರಿಯವಾದ ಆಹಾರ ಎಂಬುದು ಜನಜನಿತ. ಹಾಗಾಗಿ ಇಂದು ವಿಶ್ವ ಬಿದುರಿನ ದಿನ ಆಚರಣೆ ಮಾಡಲಾಗುತ್ತಿದೆ.

ಬಿದಿರು ಕಾಡು ಬೆಳೆಯಾದರೂ, ಈಗೀಗ ಶೃಂಗಾರಕ್ಕೆಂದು ಅದನ್ನು ಉದ್ಯಾನವನಗಳಲ್ಲೂ ಮನೆಯಂಗಳದಲ್ಲೂ ಬೆಳೆಯುತ್ತಿದ್ದಾರೆ. ಸಂಸ್ಕೃತ ಭಾಷೆಯಲ್ಲಿ, ವಂಶ, ವೇಣು, ಯುವಫಲ, ಶತಪರ್ವ, ಎಂದು ಕರೆಸಿಕೊಳ್ಳುವ ಬಿದಿರನ್ನು ಹಿಂದೂಸ್ತಾನಿಯಲ್ಲಿ ‘ಬಾಸ್,’ ಎನ್ನುತ್ತಾರೆ ಇದರಲ್ಲಿ ಬಾಸುರಿ ತಯಾರಾಗುತ್ತದೆ (ಕೊಳಲು). ಇಂಗ್ಲೀಷ್ ಭಾಷಿತದಲ್ಲಿ ‘ ಠೊರ್ನ್ಯ್ ಭಮ್ಬೂ’ ಎಂದೂ, ಲ್ಯಾಟಿನ್ ಭಾಷೆಯಲ್ಲಿ ಭಮ್ಬುಸ ಅರುನ್ದಿನೆಸಿಅ ಎಂದು ಜನರಿಗೆ ಪರಿಚತವಾಗಿದೆ. ಬಿದಿರಿನ ಔಷಧೀಯ ಗುಣಗಳನ್ನು ಅರಿತುಕೊಂಡು ಮಾನವ ಅದನ್ನು ಪ್ರತಿಮನೆಮನೆಯ ಆಪ್ತಬಂಧುವಾಗಿ ಉಪಯೋಗಿಸುವುದನ್ನು ಕಲಿತಿದ್ದಾನೆ ಇದನ್ನು ಶಿಶುನಾಳ ಶರೀಫರ ಶಿಶುನಾಳರ ಗೀತೆಗಳು ಎಂಬ ತಮ್ಮ ಕೃತಿಯಲ್ಲಿ ಹಾಡಿ ಹೊಗಳಿದ್ದಾರೆ

ಜಗತ್ತಿನಲ್ಲಿ ೫೫೦ ಪ್ರಭೇದಗಳ ಬಿದಿರು ಸಸ್ಯಗಳಿವೆಯೆಂದು ಪಟ್ಟಿಮಾಡಲಾಗಿದೆ. ಭಾರತದಲ್ಲೇ ೧೩೬ ಜಾತಿಯ ಬಿದಿರುಗಳು ಇವೆ. ಆದರೆ ನಮಗೆ ಹೆಚ್ಚಾಗಿ ಕಾಣಿಸುವುದು, ಕೇವಲ ೪೦ ಬಗೆಯ ಬಿದಿರುಗಳಷ್ಟೆ. ಬಿದಿರು ಹೂಬಿಡುವುದು, ೩೨ ವರ್ಷಗಳ ನಂತರ, ಮತ್ತೆ ೬೦ ವರ್ಷ, ೧೨೦ ವರ್ಷಗಳ ಕಾಲ ಬಾಳಿದ ನಂತರ. ಆಮೇಲೆ ಹೂ ಬಿಟ್ಟು ‘ಭತ್ತ’ ಕಟ್ಟಿಕೊಂಡ ಬಳಿಕ, ಒಣಗುವ ಜಾತಿಗಳೂ ಇವೆ. ಬಿದುರಿನ ಮೇಲೆ ಸಾಮಾನ್ಯವಾಗಿ ನಾವು ಮುಳ್ಳುಗಳನ್ನು ಕಾಣುತ್ತೇವೆ. ಆದರೆ ಮುಳ್ಳಿಲ್ಲದ ಪ್ರಭೇದಗಳೂ ಇವೆ. ಹತ್ತಿರ ಹತ್ತಿರ ಗೆಣ್ಣುಗಳಿರುವ ಬಿದಿರು ಮೆಳೆಗಳಂತೆ, ದೂರ-ದೂರ ಗೆಣ್ಣುಗಳಿರುವ ಬಿದುರಿನ ಮರಗಳೂ ಇವೆ. ಬಿದುರಿನ ಮರಗಳು ಯಾವಾಗಲೂ ಗುಂಪುಗುಂಪಾಗಿ ಬೆಳೆಯುತ್ತವೆ.

ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಬಿದಿರಿನ ಸಾಮ್ರಾಜ್ಯವೇ ಇತ್ತು. 18ನೇಶತಮಾನದಲ್ಲಿ ಬ್ರಿಟಿಷರು ಹಡಗು ಕಟ್ಟುವ ಉದ್ಯಮವನ್ನು ಭಾರತದ ಕಡಲಂಚಿಗೆ ತಂದಿದ್ದೇ ತಡ, ಅರಣ್ಯಗಳಲ್ಲಿ ಬಿದಿರಿನ ಬದಲು ಸಾಗವಾನಿ ಮೇಲುಗೈ ಪಡೆಯಿತು. ಮರಮುಟ್ಟುಗಳ ವಾಣಿಜ್ಯ ರಂಗದಲ್ಲಿ ಸಾಗವಾನಿಯ ಮೋಹಜಾಲ ಅದೆಷ್ಟು ಬಿಗಿ ಎಂದರೆ ಬಿದಿರನ್ನು ಕಾಡಿನ ಕಳೆ ಎಂದು ಪರಿಗಣಿಸಿ, ಅದನ್ನು ಕಂಡಲ್ಲಿ ಕಡಿದು ಸುಟ್ಟು ಅಲ್ಲೆಲ್ಲ ಸಾಗವಾನಿ ನೆಡುವ ಅಭಿಯಾನ ಆರಂಭವಾಯಿತು. ನಮ್ಮ ಸಂಸ್ಕೃತಿಯಲ್ಲಿ ಗಾಢವಾಗಿ ಮಿಳಿತಗೊಂಡಿದ್ದ ಬಿದಿರಿಗೆ ಸಾಗವಾನಿಯಿಂದ ಕಂಟಕ ಬಂತು. 1970ರ ನಂತರ ನೀಲಗಿರಿ ಮತ್ತು ಅಕೇಶಿಯಾ ರೂಪದಲ್ಲಿ ಬಂತು. ಸಾಮಾಜಿಕ ಅರಣ್ಯ ನಿರ್ಮಾಣದಲ್ಲಿ ಈ ಎರಡು ಸಸ್ಯಗಳಿಗೆ ಆದ್ಯತೆ ಇದ್ದಿದ್ದರಿಂದ ಅಲ್ಲಲ್ಲಿ ತಾನಾಗಿ ಬೆಳೆದಿದ್ದ ಬಿದಿರನ್ನು ಕಿತ್ತು ಅಲ್ಲಲ್ಲಿ ನೀಲಗಿರಿ ಅಥವಾ ಅಕೇಶಿಯಾ ನೆಡುತೋಪುಗಳು ತಲೆಯೆತ್ತಿದವು. ಕಾರ್ಖಾನೆಗಳು ಈ ಎರಡು ಮರಗಳನ್ನೆ ಖರೀದಿಸಲು ತೊಡಗಿದ್ದರಿಂದ ರೈತರೂ ತಮ್ಮ ಜಮೀನುಗಳಲ್ಲಿ ವ್ಯಾಪಕವಾಗಿ ಇವನ್ನೇ ಬೆಳೆಯುತ್ತ ಬಿದಿರಿಗೆ ವಿದಾಯ ಹೇಳತೊಡಗಿದರು.

ಆದರೆ ಬಿದಿರಿನ ಪ್ರಯೋಜನಗಳನ್ನು ಮನಗೊಂಡು 2009 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ 8 ನೇ ವಿಶ್ವ ಬಿದಿರು ಕಾಂಗ್ರೆಸ್‌ನಲ್ಲಿ ವಿಶ್ವ ಬಿದಿರು ಸಂಸ್ಥೆ ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ಬಿದಿರಿನ ಸಾಮರ್ಥ್ಯವನ್ನು ಹೆಚ್ಚು ಎತ್ತರದ ಮಾನ್ಯತೆಗೆ ತರುವುದು, ಪ್ರಪಂಚದಾದ್ಯಂತದ ಹೊಸ ಕೈಗಾರಿಕೆಗಳಿಗೆ ಬಿದಿರಿನ ಹೊಸ ಕೃಷಿಯನ್ನು ಉತ್ತೇಜಿಸುವುದು ಮತ್ತು ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಸ್ಥಳೀಯವಾಗಿ ಸಾಂಪ್ರದಾಯಿಕ ಬಳಕೆಗಳನ್ನು ಉತ್ತೇಜಿಸುವುದು ಡಬ್ಲ್ಯುಬಿಒ ನ ಗುರಿಯಾಗಿದೆ.

ಬಿದಿರಿನ ಚಪ್ಪರ, ಛಾವಣಿಯ ರೀಪು, ಏಣಿಯಂತು ನಗರ ಪ್ರದೇಶದಲ್ಲೂ ಜನಜನಿತ. ಬಿದಿರಿನ ಪಿಠೋಪಕರಣಗಳು ಬಲುಸುಂದರ ಮತ್ತು ಬಾಳಿಕೆ ಬರುವಂಥದ್ದು. ಬಿದಿರಿನ ಗೊಂಬೆಗಳು ಬಲು ಪ್ರಸಿದ್ಧ. ಇನ್ನು ಎಳೆ ಬಿದಿರು, ಒಳ್ಳೆಯ ಖಾದ್ಯವಸ್ತು ಇದನ್ನು ಕಳಲೆ ಎಂದೇ ಕರೆಯುತ್ತಾರೆ. ದಕ್ಷಿಣ, ಕನ್ನಡ ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಇವು ಬಹಳ ಜನಪ್ರಿಯ ತಿನಿಸುಗಳು. ಇನ್ನು ಬಿದಿರಿಗೂ ಸಂವತ್ಸರಕ್ಕೂ ಏನೋ ನಂಟು. ಬಿದಿರು ಸರಿಯಾಗಿ 60 ವರ್ಷ ಬದುಕಿರುತ್ತದೆ. ಕೊನೆಯಲ್ಲಿ ಹೂಬಿಟ್ಟು ಭತ್ತವಾದರೆ ಬಿದಿರಿನ ಆಯಸ್ಸು ಮುಗಿದಂತೆ. ಬಿದಿರಕ್ಕಿಯಿಂದ ಮಾಡಿದ ಗಂಜಿ, ಖಿಚಡಿ, ದೋಸೆ ಮುಂತಾದ ತಿನಿಸುಗಳು ಇಂದೂ ಗ್ರಾಮೀಣ ಭಾಗದಲ್ಲಿ ಜನಪ್ರಿಯ. ಬಿದಿರಿನಿಂದ ಕೆಲ ಔಷಧಗಳನ್ನು ತಯಾರಿಸುತ್ತಾರೆ.‘

ಹೀಗೆ ಹುಟ್ಟಿನಿಂದ ಸಾಯುವವರೆಗೂ ಬಿದಿರು ಒಂದಲ್ಲ ಒಂದು ರೀತಿಯಲ್ಲಿ ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರೆ ತಪ್ಪಗಲಾರದು.