ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಅಂಗವಾಗಿ ಜಾಥಾಕ್ಕೆ ಚಾಲನೆ

ಕಲಬುರಗಿ.ಮಾ.17:”ವಿಶ್ವ ಬಾಯಿ ಆರೋಗ್ಯ ದಿನಾಚರಣೆ” ಅಂಗವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥಾಕ್ಕೆ ಆರೋಗ್ಯ ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಜಂಟಿ ನಿರ್ದೇಶಕ ಡಾ.ಶಂಕ್ರಪ್ಪಾ ಮೈಲಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ರಾಜಶೇಖರ್ ಮಾಲಿ ಅವರು ಗುರುವಾರ ಚಾಲನೆ ನೀಡಿದರು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಎನ್‍ಓಹೆಚ್‍ಪಿ) ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ, ಹೆಚ್‍ಕೆಇಎಸ್‍ಎನ್ ದಂತ ಮಹಾವಿದ್ಯಾಲಯ, ಆಲ್‍ಬದರ್ ದಂತ ಮಹಾವಿದ್ಯಾಲಯ, ಇಎಸ್‍ಐಸಿ ದಂತ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ “ನಿಮ್ಮ ಬಾಯಿ ಬಗ್ಗೆ ನಿಮಗೆ ಹೆಮ್ಮೆ” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಎನ್‍ಓಹೆಚ್‍ಪಿ ಕಾರ್ಯಕ್ರಮಾಧಿಕಾರಿ ಡಾ|| ಸಂಧ್ಯಾ ಕಾನೇಕರ ಅವರು “ವಿಶ್ವ ಬಾಯಿ ಆರೋಗ್ಯ ದಿನ”ದ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಆಲ್-ಬದರ್ ದಂತ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸೈಯದ್ ಝಕಾವುಲ್ಲಾ ಮಾತನಾಡಿ, ಸಾರ್ವಜನಿಕರಲ್ಲಿ ಬಾಯಿ ಆರೋಗ್ಯ ಕುರಿತು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಯಿ ಆರೋಗ್ಯ ಕಾರ್ಯಕ್ರಮದ ಕುರಿತು ಪೋಸ್ಟರ್‍ನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಆಸ್ಪತ್ರೆಯಿಂದ ಆರಂಭಗೊಂಡ ಈ ಜಾಥಾವು ನಗರದ ಜಗತ್ ವೃತ್ತಕ್ಕೆ ಬಂದು ಕೊನೆಗೊಂಡಿತು.
ಈ ಜಾಥಾದಲ್ಲಿ ಕಲಬುರಗಿಯ ಆರೋಗ್ಯ ಇಲಾಖೆಯ ಕಾರ್ಯಕ್ರಮಾಧಿಕಾರಿಗಳು, ದಂತ ಆರೋಗ್ಯ ಅಧಿಕಾರಿಗಳು, ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಬೋಧಕರು, ವಿದ್ಯಾರ್ಥಿಗಳು, ಸ್ಕೂಲ್ ಆಫ್ ನರ್ಸಿಂಗ್‍ನ ವಿದ್ಯಾರ್ಥಿಗಳು ಪಾಲ್ಗೊಂಡಿದರು. ಕಾರ್ಯಕ್ರಮದಲ್ಲಿ ಡಾ. ಶ್ವೇತಾ ರಾಜಗಿರಿ ಸ್ವಾಗತಿಸಿದರು.