“ವಿಶ್ವ ಪುಸ್ತಕ ದಿನ” ಪ್ರತಿಯೊಬ್ಬರು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು

ಹೊಸಪೇಟೆ ಏ24: ಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಡಾ. ಸಿ.ಆರ್ ಗೋವಿಂದರಾಜ್ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯದಲ್ಲಿ ಶುಕ್ರವಾರ 25ನೇ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಒಂದೇ ಜ್ಞಾನ ವಲಯದಲ್ಲಿ ನೋಡದೆ ಬಹುಶಿಸ್ತಿಯ ನೆಲೆಯಲ್ಲಿ ಓದುವ ಕೌಶಲ್ಯವನ್ನು ಹೊಂದಿರಬೇಕು. ಆಗ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಸಾಧ್ಯವಾಗುತ್ತದೆ ಎಂದರು.
ಕುಲಪತಿ ಡಾ.ಸ.ಚಿ.ರಮೇಶ ಮಾತನಾಡಿ, ಪುಸ್ತಕಗಳನ್ನು ಪ್ರೀತಿಸುವ ಗುಣವಿರಬೇಕು. ಪ್ರತಿಯೊಬ್ಬರೂ ಕೂಡ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ರೂಢಿಯನ್ನು ಮೈಗೂಡಿಸಿಕೊಂಡಾಗ ಅನೇಕ ಚಿಂತನೆಗಳು ನಮಗೆ ಲಭ್ಯವಾಗುತ್ತದೆ. ಜ್ಞಾನಬಂಡಾರಕ್ಕೆ ಪ್ರಮುಖ ಸಾಧನವೇ ಓದು. ಅಕ್ಷರ ಇಲ್ಲದವನು ಏನನ್ನೂ ಸಾಧಿಸಲಾರ. ನಮ್ಮ ಚಿಂತನೆಗಳು, ಆಚಾರ-ವಿಚಾರಗಳು ಹಾಗೂ ಮೌಢ್ಯತೆಗಳನ್ನು ಜ್ಞಾನದಿಂದ ಮಾತ್ರ ಬದಲಾಯಿಸಬಹುದು ಎಂದರು.
ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಸಹಾಯಕ ಗ್ರಂಥಪಾಲಕ ಸುಹಾಸ್ ಎಸ್ ನಿರೂಪಿಸಿದರು. ಸಹಾಯಕ ಗ್ರಂಥಪಾಲಕ ಡಾ.ಯು. ಮಲ್ಲಿಕಾರ್ಜುನ, ಡಾ.ಎಮ್.ಸಿ.ಗುಡಿಮನಿ ಹರ್ಷ, ಮೇಘನಾ ಇತರರು ಪಾಲ್ಗೊಂಡಿದ್ದರು.