ಬ್ಯಾಡಗಿ,ಜೂ6: ಪರಿಸರವು ಮಾನವರಿಗೆ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿ, ಸಸ್ಯ ಇತ್ಯಾದಿಗಳಿಗೆ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಎಸ್.ಟಿ.ಸತೀಶ ಹೇಳಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿರುವ ಸಾಲು ಮರದ ತಿಮ್ಮಕ್ಕನ ಉದ್ಯಾನವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದ ಪ್ರತಿಯೊಂದು ಅಂಶ, ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಅಡೆತಡೆಯಿಲ್ಲದ ಉಳಿಯುವುದು ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪರಿಸರದ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ತಿಳಿಸಿದರು.
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಾಂತೇಶ ಬೇಲೂರು ಮಾತನಾಡಿ, ಅತಿಯಾದ ಮಾಲಿನ್ಯಕಾರಕಗಳು ಪರಿಸರಕ್ಕೆ ಅಪಾಯಕಾರಿ. ಪರಿಸರವನ್ನು ರೂಪಿಸುವ ಎಲ್ಲಾ ಮೂರು ಪ್ರಾಥಮಿಕ ಗೋಳಗಳಲ್ಲಿ ಮಾಲಿನ್ಯಕಾರಕಗಳು ಇರುತ್ತವೆ: ಜಲಗೋಳ, ವಾಯುಗೋಳ ಮತ್ತು ಜೀವಗೋಳ. ಹೆಚ್ಚುತ್ತಿರುವ ಮಾಲಿನ್ಯದ ಮಟ್ಟದಿಂದ ಪರಿಸರ ಪರಿಸ್ಥಿತಿಗಳು ಬಿಗಡಾಯಿಸುತ್ತಿದೆ. ಅದರ ರಕ್ಷಣೆ ಮತ್ತು ಸುಸ್ಥಿರ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಪರಿಸರ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ ವಹಿಸಿದ್ದರು. ಸರ್ಕಾರಿ ಅಭಿಯೋಜಕ ಕೆ.ಎನ್.ರಾಜಣ್ಣ, ಉಪ ಸಂರಕ್ಷಣಾಧಿಕಾರಿ ವಸಂತಕುಮಾರ್, ಮುಖ್ಯಶಿಕ್ಷಕಿ ಶೋಭಾ, ವಕೀಲರ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.