ವಿಶ್ವ ಪರಂಪರೆ ಮನುಕುಲದ ಸಂಪತ್ತಾಗಿದ್ದು, ಸಂರಕ್ಷಣೆ ಅಗತ್ಯ

ಕಲಬುರಗಿ,ನ.23: ವಿಶ್ವ ಪರಂಪರೆಯು ಮನುಕುಲದ ಸಂಪತ್ತಾಗಿದೆ. ನಮ್ಮ ದೇಶದ ಶ್ರೀಮಂತ ಸಂಸ್ಕøತಿ, ಪರಂಪರೆಯನ್ನು ಸಂರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇದರ ಬಗ್ಗೆ ಎಲ್ಲೆಡೆ ವ್ಯಾಪಕವಾದ ಜಾಗೃತಿಯಾಗಬೇಕು. ಭವ್ಯವಾದ ತಾಣಗಳು, ಸ್ಮಾರಕಗಳು, ಸುಕೇತ್ರಗಳು ಇಂದು ಅವನತಿಯ ಅಂಚಿನಲ್ಲಿವೆ. ಇವುಗಳು ನಾಶವಾದರೆ ಮುಂದಿನ ಪೀಳಿಗೆ ಕೇವಲ ಚಿತ್ರದಲ್ಲಿ ನೋಡಲು ಮಾತ್ರ ಸಾಧ್ಯವಿದೆ. ಆದ್ದರಿಂದ ಇವುಗಳನ್ನು ಸಂರಕ್ಷಿಸುವದರಿಂದ ಇತಿಹಾಸ ಮತ್ತು ಮಾನವನ ಸಂಸ್ಕøತಿ, ಪರಂಪರೆ ಉಳಿಯುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಎಂ.ಎಂ.ಎನ್ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ವಿಶ್ವ ಪರಂಪರೆ ಸಪ್ತಾಹ ಆಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ದೇಶ ತನ್ನದೇ ಆದ ಭವ್ಯವಾದ ಇತಿಹಾಸ, ಪರಂಪರೆ ಹೊಂದಿದೆ. ಇದನ್ನು ಈಗಿನ ಯುವ ಪೀಳಿಗೆಗೆ ತಿಳಿಸಿಕೊಟ್ಟು, ಉಳಿಸಿ, ಬೆಳೆಸುವುದು ಅವಶ್ಯಕ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಐತಿಹಾಸಿಕ ಸ್ಮಾರಕಗಳು, ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕು. ವಿದ್ಯಾರ್ಥಿಗಳು ಇವುಗಳನ್ನು ವೀಕ್ಷಿಸುವದರಿಂದ ನಮ್ಮ ದೇಶದ ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆ, ಇತಿಹಾಸ ತಿಳಿಯಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಅಧ್ಯಯನ ಮಾಡಿದರೆ ಸ್ಪಷ್ಟವಾದ ಚಿತ್ರಣ ಮೂಡುವುದಿಲ್ಲ. ಬದಲಿಗೆ ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಬೇಕು. ಇದರಿಂದ ಮಕ್ಕಳಿಗೆ ಹಿಂದಿನ ಪರಂಪರೆ, ಇತಿಹಾಸ ತಿಳಿದುಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಸಯ್ಯಸ್ವಾಮಿ ಹೊದಲೂರ, ಸುನೀಲಕುಮಾರ, ಗುರುಕಿರಣ, ಪ್ರಜ್ವಲ್, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರಿದ್ದರು.