ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಪತ್ರಿಕಾ ವಿತರಕರಿಗೆ ಸರ್ಕಾರ ಸ್ಪಂದಿಸಬೇಕು

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಸೆ.05 ಪತ್ರಿಕೆಗಳನ್ನು ಓದುಗರ ಮನೆಮನೆಗೂ ತಲುಪಿಸುವಲ್ಲಿ ಪತ್ರಿಕೆಗಳ ವಿತರಕರ ಅವಿರತ ಶ್ರಮವಿದೆ, ಅವರ ಕಷ್ಟನಷ್ಟಗಳಿಗೆ ಸರ್ಕಾರ ಸ್ಪಂದನೆ ಅವಶ್ಯವಾಗಿದೆ ಎಂದು ತಾಲೂಕು ಹಿರಿಯ ವರದಿಗಾರರಾದ ಉಮೇಶ್ ನೆಲ್ಕುದ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ನಿಮ್ಮಿತ್ತ, ಕೇಕ್‍ಕಟ್ ಮಾಡುವ ಮೂಲಕ ಮಾತನಾಡಿದರು. ಮಳೆ, ಸಿಡಿಲು, ಗುಡುಗು, ಚಳಿ, ಗಾಳಿ, ಕಗ್ಗತ್ತಲು ಎನ್ನದೆ ದಿನಪತ್ರಿಕೆಗಳನ್ನು, ವಾಹನಗಳಲ್ಲಿ, ಸೈಕಲ್‍ಗಳಲ್ಲಿ ಸರಿಯಾದ ಸಮಯಕ್ಕೆ ಓದುಗರಿಗೆ ತಲುಪಿಸುವ ಕಾರ್ಯ ನಿಜಕ್ಕೂ ಸಹಾಸವೇ ಆಗಿದೆ. ಎಷ್ಟೂಬಾರಿ ಓದುಗರು ಪತ್ರಿಕೆಯ ಬಿಲ್ ಕೊಡದೆ ಇರುವ ಸಂದರ್ಭದಂತ ಯಾವುದೇ ಪರಿಸ್ಥಿತಿಯಲ್ಲೂ ವಿತರಕರು ಸರಿಯಾದ ಸಮಯಕ್ಕೆ ಕಂಪನಿಗಳಿಗೆ ಬಿಲ್ ಕಟ್ಟಲೇ ಬೇಕು. ಎಲ್ಲಾ ವಿತರಕರು ನೆಮ್ಮದಿಯಾಗಿ ಇಲ್ಲ ಎನ್ನುವುದು ಮಾತ್ರ ಸತ್ಯ. ಆದ್ದರಿಂದ ಸರ್ಕಾರ ಇವರಿಗಾಗಿ ಸ್ಪಂದಿಸಬೇಕು ಎಂದರು.
ವಿತರಕ ದತ್ತಾತ್ರೇಯ ಮಾಲವಿ ಮಾತನಾಡಿದರು. ಪತ್ರಿಕೆಗಳನ್ನು ವಿತರಿಸುವ ಹುಡುಗರಿಗೆ ನಮ್ಮ ಕೈಲಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪತ್ರಿಕೆಗಳ ಹಂಚುವ ಹುಡುಗರು ಉಪಸ್ಥಿತರಿದ್ದು ಆಚರಣೆ ಆಚರಿಸಿದರು.