ವಿಶ್ವ ತಂಬಾಕು ರಹಿತ ದಿನ ಆಚರಣೆ:ಜನಜಾಗೃತಿ ಅಭಿಯಾನಕ್ಕೆ ಚಾಲನೆ

ಬಳ್ಳಾರಿ,ಜೂ.02 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಸಾರ್ವಜನಿಕರಿಗೆ ವಾಹನದಲ್ಲಿ ಧ್ವನಿವರ್ದಕದ ಮೂಲಕ ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಡಿಎಚ್‍ಒ ಡಾ.ಹೆಚ್.ಎಲ್.ಜನಾರ್ಧನ್ ಅವರು ಸೋಮವಾರ ಚಾಲನೆ ನೀಡಿದರು.
ವಾಹನದಲ್ಲಿ ಧ್ವನಿವರ್ದಕದ ಮೂಲಕ ಜನಜಾಗೃತಿ ಮೂಡಿಸುವ ಈ ಅಭಿಯಾನವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಿಂದ, ಸಂಗಂ ವೃತ್ತ, ರಾಘವೇಂದ್ರ ಚಿತ್ರ ಮಂದಿರ ವೃತ್ತ, ಮೀನಾಕ್ಷಿ ವೃತ್ತ, ಜಿಲ್ಲಾಧಿಕಾರಿಗಳ ಕಾರ್ಯಲಯ, ರಾಯಲ್ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೋಲೀಸ್ ಠಾಣೆ, ಎ.ಪಿ.ಎಂ.ಸಿ ಯಾರ್ಡ್, ಬಾಪೂಜಿ ನಗರ, ಮಿಲ್ಲರ್ ಪೇಟೆ, ಶ್ರೀ ರಾಂಪುರ ಕಾಲೋನಿ, ಎಮ್.ಜಿ ವೃತ್ತ, ಪಟೇಲ್ ನಗರ, ಎಸ್.ಎನ್.ಪೇಟೆ, ಗಾಂಧಿನಗರ, ದುರ್ಗಮ್ಮ ಗುಡಿ ವೃತ್ತ, ಎಸ್.ಪಿ.ಸರ್ಕಲ್, ಕೋಟೆ, ಕೌಲ್ ಬಜಾರ್, ಬೆಳಗಲ್ ಕ್ರಾಸ್, ರೇಡಿಯೋ ಪಾರ್ಕ, ನಂದಿ ಸ್ಕೂಲ್ ಹೊಸಪೇಟೆ ರಸ್ತೆ, ಸುಧಾ ಕ್ರಾಸ್, ಓ.ಪಿ.ಡಿ. ಇಂದಿರಾನಗರ, ದೇವಿನಗರ, ಮೋತಿ ವೃತ್ತ, ರಾಯಲ್ ವೃತ್ತದ ಮುಖಾಂತರ ಪುನಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಗೆ ತಲುಪಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಚ್‍ಒ ಡಾ.ಜನಾರ್ಧನ್ ಅವರು ಸಮುದಾಯದಲ್ಲಿ ಅನಾದಿಕಾಲದಿಂದಲೂ ಬಳಕೆಯಲ್ಲಿರುವ ತಂಬಾಕಿನ ವಿವಿಧ ಉತ್ಪನ್ನಗಳನ್ನು ಸಾರ್ವಜನಿಕ ಆರೋಗ್ಯದ ಹಿನ್ನೆಲೆಯಲ್ಲಿ ಹಂತಹಂತವಾಗಿ ಬಳಕೆಯನ್ನು ನಿಯಂತ್ರಿಸುವ ಕಾರ್ಯ ಕಾನೂನಾತ್ಮಕ ರೀತಿಯಲ್ಲಿ ಹಾಗೂ ಜಾಗೃತಿ ನೀಡುವ ಮೂಲಕ ಕೈಗೊಳ್ಳಲಾಗುತ್ತಿದೆ. ಇತ್ತೀಚಿಗೆ ಜಾಗತಿಕವಾಗಿ ಕಂಡುಬಂದ ಕರೋನಾ ನಿಯಂತ್ರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಸೇವನೆ ಮತ್ತು ಉಗುಳುವುದನ್ನು ನಿಷೇಧಿಸಲಾಗಿದ್ದು ಇದಕ್ಕಾಗಿ ಸಾರ್ವಜನಿಕರು ಸಂಪೂರ್ಣವಾಗಿ ಸಹಕಾರ ನೀಡುವಂತೆ ಕೋರಿದರು.
ತಂಬಾಕುನಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ.ತಂಬಾಕು ವಸ್ತುಗಳಲ್ಲಿ (ಸಿಗರೇಟ್, ಬೀಡಿ, ಸಿಗ್ಯಾರ್ ಇತ್ಯಾದಿ) 7000 ರಾಸಾಯಿನಿಕ ವಸ್ತುಗಳಿದ್ದು, ಅದರಲ್ಲಿ 69ರಷ್ಟು ಕ್ಯಾನ್ಸರ್‍ಕಾರಕ ವಸ್ತುಗಳಾಗಿವೆ. ಧೂಮರಹಿತ (ಜಿಗಿಯುವ ತಂಬಾಕುಗಳು) ತಂಬಾಕು ಉತ್ಪನ್ನಗಳಲ್ಲಿ 3095 ರಾಸಾಯನಿಕಗಳಿದ್ದು. ಅದರಲ್ಲಿ 28ರಷ್ಟು ಕ್ಯಾನ್ಸ್‍ರ್‍ಕಾರಕ ವಸ್ತುಗಳಿವೆ ಎಂದು ಡಿಎಚ್‍ಒ ಡಾ.ಜನಾರ್ಧನ್ ಅವರು ವಿವರಿಸಿದರು.
ತಂಬಾಕು ಅಥವಾ ನಿಕೋಟಿನ್ ಬಳಕೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15ವರ್ಷ ಕಡಿಮೆಯಾಗುತ್ತೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಬೀಡಿ, ನಶ್ಯ ಮತ್ತು ಇತರೆ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟ್‍ಗಿಂತ ಸುರಕ್ಷಿತ ಎಂಬ ನಂಬಿಕಿಯಿದೆ. ಇದು ಸತ್ಯವಲ್ಲ ಅವು ಕೂಡ ಸಿಗರೇಟ್‍ನಂತೆಯೇ ಅಪಾಯಕಾರಿ; ಇವು ಅದನು ಸೇವಿಸುವ ವ್ಯಕ್ತಿ ಮಾತ್ರವಲ್ಲದೆ ಆತನ ಸುತ್ತಮುತ್ತಲಿನನವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಮರಿಯಂಬಿ, ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ. ಆರ್.ಅಬ್ದುಲ್ಲಾ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಜಶೇಖರ್ ರೆಡ್ಡಿ. ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಗುರುರಾಜ್ ಬಿ ಚವ್ಹಾಣ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ದುರುಗೇಶ ಮಾಚನೂರು, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ಜಬೀನ್ ತಾಜ್, ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಂಯೋಜಕರು ಗುರುರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ತಂಬಾಕು ವ್ಯಸನ ಮುಕ್ತ ಕೇಂದ್ರದ ಮಲ್ಲೇಶಪ್ಪ, ಡಾ. ಗುರುಪ್ರಸಾದ್ ಪುರೋಹಿತ್, ಶರತ್ ಬಾಬು ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಸಿಬ್ಬಂದಿಗಳು ಉಪಸ್ಥಿತರಿದ್ದರು.