ಕಲಬುರಗಿ.ಮೇ.31:ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ಯ ನಗರದಲ್ಲಿ ಬುಧವಾರ ಕ್ಯಾನ್ಸರ್ ಜಾಗೃತಿ ಜಾಥಾ ಜರುಗಿತು. ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಅಲ್ ಬದರ್ ದಂತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಜಂಟಿಯಾಗಿ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಮಿನಿ ವಿಧಾನಸೌಧದವರೆಗೂ ಕ್ಯಾನ್ಸರ್ ಜಾಗೃತಿ ಜಾಥಾ ಜರುಗಿತು.
ಸುಮಾರು 300 ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾ ಮಿನಿ ವಿಧಾನಸೌಧಕ್ಕೆ ತಲುಪಿದ ಮೇಲೆ ವಿದ್ಯಾರ್ಥಿಗಳಿಗೆ ತಂಬಾಕಿನಿಂದ ದೂರ ಇರುವಂತೆ ಪ್ರಾದೇಶಿಕ ಮುಖ್ಯಸ್ಥರಿಂದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಅಲ್ ಬದರ್ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಿಂದ ಕರ್ನಾಟಕವನ್ನು ತಂಬಾಕು ಮುಕ್ತ ಮಾಡಲು ಸಂಬಂಧಪಟ್ಟ ಖಾತೆಯ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ವಿಶ್ವ ತಂಬಾಕು ರಹಿತ ದಿನ ಈ ವರ್ಷದ ಘೋಷಣೆಯಂತೆ ನಮಗೆ ಆಹಾರ ಬೇಕು, ತಂಬಾಕು ಬೇಡ ಎಂಬ ಭಿತ್ತಿಪತ್ರ ಹಾಗೂ ಬ್ಯಾನರ್‍ಗಳನ್ನು ಪ್ರದರ್ಶಿಸುವ ಮೂಲಕ ತಂಬಾಕು ಬೆಳೆಯದೇ ಇನ್ನಿತರ ಪೌಷ್ಠಿಕ ಆಹಾರ ಬೆಳೆಯುವಂತೆ ಜಾಗೃತಿ ಮೂಡಿಸಲಾಯಿತು ಮತ್ತು ಪ್ರೇರೇಪಿಸಲಾಯಿತು.
ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಗುರುರಾಜ್ ಕುಲಕರ್ಣಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಒಂದು ವರದಿಯ ಪ್ರಕಾರ ನಮ್ಮ ದೇಶದ ವಯಸ್ಕರರಲ್ಲಿ ಶೇಕಡಾ 30ರಷ್ಟು ನಿಷ್ಕ್ರೀಯ ಧೂಮಪಾನಕ್ಕೆ ತುತ್ತಾಗುತ್ತಿದ್ದಾರೆ. ತಂಬಾಕು ಪದಾರ್ಥ ಸೇವನೆಯಿಂದಾಗಿ ಕ್ಯಾನ್ಸರ್‍ಗೆ ಆಹ್ವಾನ ಕೊಟ್ಟಂತೆ. ಕ್ಯಾನ್ಸರ್ ಪೀಡಿತ ವ್ಯಕ್ತಿ ನೋವನ್ನು ಅನುಭವಿಸುವುದಲ್ಲದೇ ಆ ವ್ಯಕ್ತಿಯ ಕುಟುಂಬವೂ ಆರ್ಥಿಕ ನಷ್ಟ ಹೊಂದುತ್ತದೆ. ಸರ್ಕಾರದಿಂದ ಕ್ಯಾನ್ಸರ್ ಚಿಕಿತ್ಸೆಗೆ ತಗಲುವ ವೆಚ್ಚದಿಂದ ದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಮುಖ್ಯಸ್ಥ ಶ್ರೀನಿಧಿ ನಾಯ್ಕಲ್, ಬಸವರಾಜ್ ಕಂದಗೂಳ್, ದಿಗಂಬರ್ ಕುಲಕರ್ಣಿ, ದೀನನಾಥ್ ಕುಲಕರ್ಣಿ, ಕಾಲೇಜಿನ ಪ್ರಿನ್ಸಿಪಾಲ್ ಡಾ. ಸೈಯದ್ ಝಕಾ ಉಲ್ಲಾಹ್, ಇಲಾಖೆ ಮುಖ್ಯಸ್ಥರಾದ ಡಾ. ಸಂಗೀತಾ ಮಹೇಂದ್ರಕರ್ ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.