ವಿಶ್ವ ಜಾಂಬೂರಿಗೆ ತಟ್ಟಿದ ತಾಪಮಾನ

ನ್ಯೂಯಾರ್ಕ್, ಆ.೫- ದಕ್ಷಿಣ ಕೊರಿಯಾದಲ್ಲಿ ಸದ್ಯ ನಡೆಯುತ್ತಿರುವ ವಿಶ್ವ ಸ್ಕೌಟ್ ಜಾಂಬೂರಿ ಆಯೋಜನೆ ಇದೀಗ ವಿಪರೀತ ತಾಪಮಾನದ ಪರಿಣಾಮ ತೂಗುಯ್ಯಾಲೆಯಲ್ಲಿನ ಸ್ಥಿತಿಯಲ್ಲಿದೆ. ತೀವ್ರತರವಾದ ತಾಪಮಾನ ಹಾಗೂ ಪ್ರತಿಕೂಲ ಹವಾಮಾನದ ಪರಿಣಾಮ ಈಗಾಗಲೇ ಅಮೆರಿಕಾ, ಸಿಂಗಾಪೂರ್, ಬ್ರಿಟನ್ ಮುಂತಾದ ದೇಶಗಳು ತಮ್ಮ ತಮ್ಮ ಮಕ್ಕಳನ್ನು ಜಾಂಬೂರಿಯಿಂದ ಹಿಂದಕ್ಕೆ ಕರೆಸಿಕೊಂಡಿದೆ. ಹೀಗಾಗಿ ಜಾಂಬೂರಿಯನ್ನೇ ರದ್ದುಗೊಳಿಸಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿದೆ.
ದಕ್ಷಿಣ ಕೊರಿಯಾದ ಪಶ್ಚಿಮ ಕರಾವಳಿಯ ಬುವಾನ್ ನಗರದ ಸಮೀಪವಿರುವ ಸೇಮಾಂಗೇಮ್‌ನಲ್ಲಿ ತಾಪಮಾನವು ೩೪ ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಸದ್ಯ ಇಲ್ಲಿ ೧೪ರಿಂದ ೧೮ರ ಹರೆಯದ ಸುಮಾರು ೩೯,೦೦೦ ವಿದ್ಯಾರ್ಥಿಗಳು ಜಾಂಬೂರಿಯಲ್ಲಿ ಭಾಗವಹಿಸಿದ್ದು, ಕ್ಯಾಂಪಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ನಿರತರಾಗಿದ್ದಾರೆ. ಈ ನಡುವೆ ಪ್ರತಿಕೂಲ ತಾಪಮಾನದ ಪರಿಣಾಮ ಶನಿವಾರ ಅಮೆರಿಕಾ ತಂಡಗಳು ಜಾಂಬೂರಿಯಲ್ಲಿ ಪಾಲ್ಗೊಳ್ಳುವುದರಿಂದ ಹಿಂದೆಸರಿದಿರುವುದು ಸ್ಪರ್ಧೆ ಆಯೋಜಕರಿಗೆ ದೊಡ್ಡ ಹಿನ್ನಡೆ ಎಂದೇ ಬಿಂಬಿಸಲಾಗಿದೆ. ಅದೂ ಅಲ್ಲದೆ ಸಿಂಗಾಪೂರ್, ಬ್ರಿಟನ್ ಮುಂತಾದ ದೇಶಗಳು ಕೂಡ ಅಮೆರಿಕಾದ ಹಾದಿಯನ್ನೇ ಅನುಸರಿಸಿದೆ.
ಅತ್ತ ಮತ್ತೊಂದೆಡೆ ವಿಶ್ವ ಜಾಂಬೂರಿಯನ್ನು ಸರಾಗವಾಗಿ ನಡೆಯುವಂತೆ ಮಾಡುವ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಸ್ಥಳದಲ್ಲಿ ನೀರಿನ ಟ್ಯಾಂಕ್ ಸಹಿತ ಹವಾನಿಯಂತ್ರಕ ವ್ಯವಸ್ಥೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿದೆ. ಅಲ್ಲದೆ ಔಷಧ ಹಾಗೂ ವೈದ್ಯರ ಸಂಖ್ಯೆಯನ್ನು ಕೂಡ ಹೆಚ್ಚಿಸಲಾಗಿದೆ.
ಇನ್ನು ಮಕ್ಕಳನ್ನು ಹಿಂದಕ್ಕೆ ಕರೆಸಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಂಗಾಪೂರ್ ಸ್ಕೌಟ್ ಅಸೋಸಿಯೇಶನ್, ನಮ್ಮ ಯುವಜನರು ಮತ್ತು ವಯಸ್ಕ ಸ್ವಯಂಸೇವಕರ ಸುರಕ್ಷತೆ ಮತ್ತು ಕಲ್ಯಾಣವು ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಮಕ್ಕಳನ್ನು ಹಿಂದಕ್ಕೆ ಕರೆಸುವ ಮುನ್ನ ಆಯೋಜಕರ ಜೊತೆ ಮಾತುಕತೆ ನಡೆಸಲಾಗಿದೆ. ಸದ್ಯ ನಮ್ಮ ನಿಯೋಗವನ್ನು ಡೇಜಿಯೋನ್ ಮೆಟ್ರೋಪಾಲಿಟನ್ ಸಿಟಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದೆ.