ವಿಶ್ವ ಜನಸಂಖ್ಯಾ ದಿನ : ಆರೋಗ್ಯ ಇಲಾಖೆಯಿಂದ ಜಾಗೃತಿ ಜಾಥಾ

ಅಥಣಿ :ಜು.13: ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಜನಸಂಖ್ಯಾ ಸ್ಫೊ?ಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದೇ ವಿಶ್ವ ಜನಸಂಖ್ಯೆ ದಿನಾಚರಣೆಯ ಉದ್ದೇಶವಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಹೇಳಿದರು.
ಅವರು ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ದೇಶದಲ್ಲಿ ನಿರುದ್ಯೋಗ, ಬಡತನ, ಮಾಲಿನ್ಯದ ಮಟ್ಟದಲ್ಲಿ ಏರಿಕೆ, ನೈಸರ್ಗಿಕ ಸಂಪನ್ಮೂಲಗಳ ತ್ವರಿತ ಬಳಕೆ, ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಆದ್ದರಿಂದ ಜನರಲ್ಲಿ ಜನಸಂಖ್ಯಾ ನಿಯಂತ್ರಣದ ಅರಿವು ಮೂಡಿಸುವುದು ಅಗತ್ಯವಾಗಿದೆ.1987 ರಲ್ಲಿ ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿತ್ತು. ಇದರ ಜನಸಂಖ್ಯಾ ಹೆಚ್ಚಳದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು, ತನ್ನ ಅಂಗ ಅಂಸ್ಥೆಯಾದ ‘ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ’ಯ ಮೂಲಕ 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೂ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ. ಪ್ರತಿ ವರ್ಷ ವಿವಿಧ ಘೋಷಣೆಗಳೊಂದಿಗೆ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಜಾಧಿಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಹಾಗೂ ಸಮೃದ್ಧ ಜೀವನವನ್ನು ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದರು.
ಈ ವೇಳೆ ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ, ಡಾ. ಸಿ ಎಸ್ ಪಾಟೀಲ, ಡಾ. ರಮೇಶ ಹುಲಕುಂದ, ಪ್ರಭು ದೊಡ್ಡಮನಿ, ಶ್ರೀಮತಿ ಗುಳಿಧರ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.