ವಿಶ್ವ ಕ್ಷಯರೋಗ ದಿನಾಚರಣೆ ಜಾಗೃತಿ ಜಾಥಾಗೆ ಡಿಸಿ ಮಾಲಪಾಟಿ ಚಾಲನೆ

ಬಳ್ಳಾರಿ,ಮಾ.24; ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ
ಪ್ರಯುಕ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಅವರು ಚಾಲನೆ ನೀಡಿದರು‌.
ಜಾಥಾ ಚಾಲನೆ ನೀಡಿದ ನಂತರ ಮಾತನಾಡಿದ ಅವರು. ರಾಜ್ಯದಲ್ಲಿ ನಮ್ಮ ಜಿಲ್ಲೆ ಕ್ಷಯರೋಗ ಪ್ರಕರಣಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ವೈದ್ಯರು ಕಠಿಣ ಕ್ರಮವಹಿಸದರೆ ಬರುವ ಮೂರ್ನಾಲ್ಕು ವರ್ಷದಲ್ಲಿ ಸಂಪೂರ್ಣವಾಗಿ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ರೂಪಿಸಬಹುದು. ಕೊರೋನಾ ಕಾರಣದಿಂದಾಗಿ ಕಳೆದ ವರ್ಷ ಕ್ಷಯರೋಗವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈಗಾಗಲೇ ಎರಡನೇ ಅಲೆ ನಮ್ಮನ್ನು ಕಾಡುತ್ತಿದ್ದರು ಕ್ಷಯರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕವಾದ ಕೆಲಸ ಆಗಿದೆ. ಕ್ಷಯರೋಗ ನಿಯಂತ್ರಿಸಲು ವೈದ್ಯರ ಜೊತೆಗೆ ಸಾರ್ವಜನಿಕರು ಕೂಡ ಸಹಕರಿಸಿ ಎಂದರು.
ಕ್ಷಯರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಂದ ಗ್ರಾಮದಲ್ಲಿ ನೂರರಷ್ಟು ಕ್ಷಯರೋಗದ ಸ್ಕ್ರೀನಿಂಗ್ ಮಾಡಿ, ಸಾರ್ವಜನಿಕರಲ್ಲಿ ಈ ರೋಗದ ಕುರಿತು ಅರಿವು ಮೂಡಿಸುವ ಕಾರ್ಯ ಆಗಲಿ. ಕ್ಷಯರೋಗ ಮುಕ್ತ ಜಿಲ್ಲೆಯನ್ನು ನಿರ್ಮಾಣ ಮಾಡಲು ಎಲ್ಲರು ಕೈ ಜೋಡಿಸಿ. ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಕ್ಷಯರೋಗವನ್ನು ಮುಕ್ತವಾಗಿಸೋಣವೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಗುರುನಾಥ್ ಚೌಹಾಣ್,
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಎಸ್.ಅನಿಲ್‍ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ರಾಜಶೇಖರ್ ರೆಡ್ಡಿ,ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ ಆರ್., ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮರಿಯಂ ಬೀ, ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪ ಅವರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಇತರರು ಇದ್ದರು.