ವಿಶ್ವ ಕ್ಷಯರೋಗ ದಿನಾಚರಣೆ-ಜಾಗೃತಿ ಜಾಥಾ

ಸಿರವಾರ, ಮಾ.೨೫- ಕ್ಷಯ ರೋಗಕ್ಕೆ ೫ ಸಾವಿರ ವರ್ಷಗಳ ಇತಿಹಾಸ ಇದ್ದೂ, ಅದನ್ನು ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ, ನಿರ್ಭಯವಾಗಿ ಆಸ್ಪತ್ರೆಗೆ ಬನ್ನಿ ಚಿಕಿತ್ಸೆ ಪಡೆಯುವ ಮೂಲಕ ದೇಶದಿಂದ ಕ್ಷಯರೋಗವನ್ನು ತೊಲಗಿಸೊಣ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪರಿಮಳಾ ಮೈತ್ರಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿ.ಪಂ ರಾಯಚೂರು ಹಾಗೂ ಕ್ಷಯ ಘಟಕದ ವತಿಯಿಂದ ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ವರ್ಷದ ಘೋಷವಾಕ್ಯ ಕಾಲ ಘಟಿಸುತ್ತಿದೆ ಎಂಬ ವಾಕ್ಯದೊಂದಿಗೆ ಕ್ಷಯರೋಗವು ಸುಮಾರು ೫ ಸಾವಿರ ವರ್ಷಗಳ ಇತಿಹಾಸ ಹೊಂದಿದೆ, ಅಂದಿನಿಂದ ಇವತ್ತಿನವರೆಗೂ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಆದರೂ ಕ್ಷಯ ರೋಗವು ಮಾನವನನ್ನು ಬಿಟ್ಟು ಹೋಗುತ್ತಿಲ್ಲ ಕಾರಣ ಸಮುದಾಯದ ಜನರು ರೋಗದ ಬಗ್ಗೆ ನಿರ್ಲಕ್ಷತೆ ವಹಿಸುತ್ತಿದ್ದಾರೆ. ಪ್ರತಿಯೊಬ್ಬರು ಕ್ಷಯ ರೋಗದ ಬಗ್ಗೆ ಜಾಗೃತರಾಗಬೇಕು ಎಂದರು.
ಕ್ಷಯರೋಗದ ಮೇಲ್ವಿಚಾರಕ ಪ್ರೇಮಪ್ರಸಾದ ಮಾತನಾಡಿ ಎರಡು ವಾರಕಿಂತಲೂ ಹೆಚ್ಚು ಕೆಮ್ಮು, ಜ್ವರ, ಕಫದ ಜೊತೆಗೆ ರಕ್ತ ಬೀಳುವುದು, ಹಸಿವಾಗದೆ ಇರುವುದು, ತೂಕ ಕಡಿಮೆ ಆಗವುದು, ರಾತ್ರಿ ಬೇವರು ಬರುವುದು ಇವು ಕ್ಷಯರೋಗದ ಲಕ್ಷಣಗಳಾಗಿವೆ. ಈ ರೀತಿ ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಯ ಜೊತೆಗೆ ರೋಗಿಗಳಿಗೆ ಮಾಶಾಸನವನ್ನು ನೀಡಲಾಗುವುದು ಎಂದರು.
ಆರೋಗ್ಯ ಕೇಂದ್ರದ ಬಸವೇಶ್ವರ ವೃತ್ತದ ಮೂಲಕ ಪಟ್ಟಣ ಪಂಚಾಯತಿವರೆಗೂ ಜಾಗೃತಿ ಜಾಥಾವನ್ನು ಮಾಡಲಾಯಿತು.
ಡಾ.ಪ್ರವೀಣ ಕುಮಾರ, ಹಿರಿಯ ಆರೋಗ್ಯ ಸಹಾಯಕ ಗುರುಪಾದಯ್ಯ, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಭಾಗವಿಸಿದರು.