ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜಾಗೃತಿ ಜಾಥ


ಸಂಜೆವಾಣಿ ವಾರ್ತೆ
ಗಂಗಾವತಿ :ಏ,1-  ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ನಾಳೆ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಜಾಗೃತಿ ಜಾಥ ನೆಡಸಲಾಯತು.
ಭಾರತೀಯ ವೈದ್ಯಕೀಯ ಸಂಘ ಮತ್ತು ಮೈತ್ರಿ ವಿಭಾಗದ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಐಎಂಯ ಭವನದಿಂದ ಗಾಂಧಿ ವೃತ್ತದವರೆಗೆ ಜಾಗೃತಿ ಜಾಥ ನಡೆಸಲಾಯಿತು.
ಐಎಂಎ ಸಂಘದ ತಾಲೂಕಾ ಅಧ್ಯಕ್ಷ ಡಾ. ಕೆ.ಎನ್ ಮಧುಸೂಧನ್ ಮಾತನಾಡಿ, ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ  ನಾಳೆ ಐಎಂಎ ಭವನದಲ್ಲಿ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಶಿಬಿರದಲ್ಲಿ ಸ್ತನ, ಗರ್ಭ ಸೇರಿದಂತೆ ಇತರೆ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚುವುದು ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವುದು ಈ ಆಚರಣೆಯ ಮೂಲ ಉದ್ದೇಶ. ಕ್ಯಾನ್ಸರ್‌ ನಮ್ಮ ಕೈ ಮೀರಿದ ರೋಗವಲ್ಲ ಎಂಬ ಸಂದೇಶವನ್ನು ಸಾರುವ ಉದ್ದೇಶ ಈ ಆಚರಣೆಯ ಹಿಂದೆ ಇದೆ. ನಿರ್ದಿಷ್ಟ ಕಾರಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಹಲವು ಕಾರಣಗಳು ಸೇರಿ ಕ್ಯಾನ್ಸರ್‌ ಸಂಭವಿಸುತ್ತವೆ. ಜೊತೆಗೆ ಪರಿಸರದಲ್ಲಿನ ಪರಿಸ್ಥಿತಿಗಳು ಮುಖ್ಯ ಕಾರಣ. ವಿಕಿರಣ, ಕೆಲವು ವೈರಸ್‌ಸೋಂಕುಗಳು, ಜೀವಕೋಶಗಳ ಕಾರ್ಯಪ್ರವೃತ್ತಿಯನ್ನು ಬದಲಿಸಿ ಕ್ಯಾನ್ಸರ್‌ ಕಾರಕಗಳನ್ನಾಗಿ ಮಾಡುತ್ತದೆ. ಇದರೊಂದಿಗೆ ವಯಸ್ಸು, ಲಿಂಗ, ಪರಿಸರ, ವಂಶಾವಳಿ ಮುಂತಾದವು ಕೂಡ ಕ್ಯಾನ್ಸರ್‌ಕಾರಕವಾಗಿ ಪರಿಣಮಿಸಬಹುದು. ತಂಬಾಕಿನ ಸೇವನೆಯಿಂದ ಹಿಡಿದು ಧೂಮಪಾನ, ಮದ್ಯಪಾನ, ತಪ್ಪು ಆಹಾರಪದ್ಧತಿಗಳು, ಎ ಹಾಗೂ ಸಿ ವಿಟಮಿನ್‌ ಕೊರತೆ, ಆಹಾರದಲ್ಲಿ ಕೃತಕ ರಾಸಾಯನಿಕಗಳ ಹೆಚ್ಚುಹೆಚ್ಚು ಬಳಕೆ, ಬದಲಾದ ಜೀವನಶೈಲಿಯಿಂದ ಹೆಚ್ಚುತ್ತಿರುವ ಬೊಜ್ಜು, ಹಾಗೂ ಹೆಚ್ಚಾಗುತ್ತಿರುವ ಹಾರ್ಮೋನು ಅಸಮತೋಲನ, ಹೆಚ್ಚುತ್ತಿರುವ ರಾಸಾಯನಿಕ ಸೌಂದರ್ಯ ವರ್ಧಕಗಳ ಬಳಕೆ ಹಾಗೂ ಸೂರ್ಯನ ಅತಿಯಾದ ಅಲ್ಟ್ರಾವೈಲೆಟ್‌ಕಿರಣಗಳಿಗೆ ಹಾಗೂ ಇತರ ವಿಕಿರಣ ವಸ್ತುಗಳಿಗೆ ತೆರೆದುಕೊಳ್ಳುವುದು ಹೀಗೆ ಕ್ಯಾನ್ಸರ್‌ಗೆ ಹತ್ತುಹಲವು ಕಾರಣಗಳಿವೆ. ಸಾರ್ವಜನಿಕರು ಈ ಉಚಿತ ಶಿಬಿರ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.
ಈ ವೇಳೆ ಡಾ. ಈಶ್ವರ ಸವಡಿ, ಡಾ.ಸುಲೋಚನಾ ಚಿನಿವಾಲರ, ಡಾ.ಸತೀಶ ರಾಯ್ಕರ್, ಡಾ.ರಂಘನಾಥ ಪುರೋಹಿತ, ಡಾ.ಮಹಾತೇಶ ಪಟ್ಟಣಶೇಟ್ಟಿ, ಡಾ.ಮಂಜುಳಾ ಸೇರಿದಂತೆ ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು.