ಕಲಬುರಗಿ,ಏ.28: ಮೇ 1ರಂದು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸರ್ಕಾರಿ ವಲಯ ಈ ದಿನಾಚರಣೆಗೆ ರಜೆ ನೀಡುವ ಮೂಲಕ ಗೌರವಿಸುತ್ತಿದೆ. ಆದಾಗ್ಯೂ, ಖಾಸಗಿ ಕ್ಷೇತ್ರದ ದುಡಿಯುವ ವರ್ಗಕ್ಕೆ ಇಂತಹ ಗೌರವ ಕೊಟ್ಟಿಲ್ಲ ಎಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮರಾಯ್ ಎಂ. ಕಂದಳ್ಳಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ವಲಯದ ವಾಣಿಜ್ಯೋದ್ಯಮಿಗಳು, ವ್ಯಾಪಾರಿಗಳು, ಗುತ್ತಿಗೆದಾರರು, ವರ್ತಕರು ಮೇ 1ರಂದು ತಮ್ಮ ಅಧೀನದಲ್ಲಿ ದುಡಿಯುವ ಕೆಲಸಗಾರರಿಗೆ ವೇತನ ಸಹಿತವಾಗಿ ರಜೆ ನೀಡಿ ದುಡಿಯುವ ವರ್ಗಕ್ಕೆ ಮತ್ತು ಕಾರ್ಮಿಕ ದಿನಾಚರಣೆಗೆ ಗೌರವ ಕೊಡಬೇಕು ಎಂದು ಮನವಿ ಮಾಡಿದರು.
ಕಟ್ಟಡ ಕಾರ್ಮಿಕರಿಗೆ ಸರ್ಕಾರ ಸಹಸ್ರಾರು ಕೋಟಿ ರೂ.ಗಳ ಯೋಜನೆಗಳನ್ನು ರೂಪಿಸಿ ಹಣ ಮಂಜೂರು ಮಾಡಿದರೂ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಮರ್ಪಕ ಅನುಷ್ಠಾನವಾಗಿಲ್ಲ. ಹಾಗಾಗಿ ಸಮಸ್ತ ಕಾರ್ಮಿಕರ ಸಂಘಟನೆಯ ಶಕ್ತಿ ತೋರಿಸುವ ಉದ್ದೇಶದಿಂದ ಮತ್ತು ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಇರುವ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಕಾರ್ಮಿಕರ ದಿನಾಚಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮೇ 1ರಂದು ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ಉದ್ಯಾನವನದ ಬೃಹತ್ ವೇದಿಕೆಯಲ್ಲಿ ಬಸವ, ಅಂಬೇಡ್ಕರ್, ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ನಮನ ಸಲ್ಲಿಸಲಾಗುವುದು. ನಂತರ ಕಾರ್ಯಕ್ರಮ ಆರಂಭಿಸಲಾಗುವುದು. ಉದ್ಘಾಟನೆಯನ್ನು ಲಿಂಗರಾಜ್ ಅಪ್ಪಾ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಹೋರಾಟಗಾರ ಲಕ್ಷ್ಮಣ್ ದಸ್ತಿ, ಅನೇಕ ಪತ್ರಕರ್ತರು, ಕಾರ್ಮಿಕ ಇಲಾಖೆಯ ಅಧಿಕಾರಿ ರಮೇಶ್ ಕುಂಬಾರ್, ರವೀಂದ್ರಕುಮಾರ್ ಬಲ್ಲೂರ್, ಮುಖಂಡರಾದ ಪ್ರದೀಪ್ ಅಣದಿ, ಮುರುಳೀಧರ್ ಜಿ. ಕರಳಿಕರ್, ಅನಿಲಕುಮಾರ್ ಮೆಂಗಾಣಿ ಮುಂತಾದವರು ಆಗಮಿಸುವರು ಎಂದು ಅವರು ಹೇಳಿದರು.
ನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು ಐವತ್ತು ಸಾವಿರ ಕಾರ್ಮಿಕರು ಇದ್ದಾರೆ. ಇತರೆ ಕ್ಷೇತ್ರದ ಸುಮಾರು 25000 ಕಾರ್ಮಿಕರು ದುಡಿಯುತ್ತಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ರಾಜು ಜಮಾದಾರ್, ಮರೆಪ್ಪ ರೊಕ್ನಡಗಿ, ಅಣ್ಣಯ್ಯ ಗುತ್ತೇದಾರ್, ಶಿವಕುಮಾರ್ ಚಳಗೇರಿ, ಚಂದ್ರಕಾಂತ್, ಮೋಹನ್ ಮುಂತಾದವರು ಉಪಸ್ಥಿತರಿದ್ದರು.