ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷಾಧಿಕಾರಿ ನೇಮಕಕ್ಕೆ ಒತ್ತಾಯ

ದಾವಣಗೆರೆ.ಮಾ.೬; ದಾವಣಗೆರೆಯಲ್ಲಿ 3 ನೇ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದಕ್ಕೆ ಸ್ವಾಗತ. ಆದಷ್ಟು ಬೇಗ ವಿಶೇಷಾಧಿಕಾರಿ ನೇಮಕ ಮಾಡಬೇಕು ಎಂಬುದೂ ಸೇರಿದಂತೆ ಆರು ನಿರ್ಣಯಗಳನ್ನು ಚನ್ನಗಿರಿ ತಾಲೂಕಿನ ಹರನಹಳ್ಳಿ-ಕೆಂಗಾಪುರದಲ್ಲಿ ನಡೆದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿದೆ.ಕಸಾಪ ಗೌರವಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ನಿರ್ಣಯ ಮಂಡಿಸಿದರು. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಎಲ್ಲಾ ಹಂತದ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ದಾವಣಗೆರೆ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಆಧಾರಿತ ಹಾಗೂ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಸ್ಥಾಪನೆ ಹೆಚ್ಚೆಚ್ಚು ಆಗಬೇಕು.  ದಾವಣಗೆರೆ ಜಿಲ್ಲೆ ಹಾಗೂ ವಿಶೇಷವಾಗಿ ಚನ್ನಗಿರಿ ತಾಲೂಕನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿಸುವ ನಿಟ್ಟಿನಲ್ಲಿ ಚನ್ನಗಿರಿ ತಾಲೂಕಿನ ಸೂಳೆಕೆರೆ, ಸಂತೆಬೆನ್ನೂರಿನ ಪುಷ್ಕರಣಿ, ಕೆಳದಿ ಚನ್ನಮ್ಮ ಕೋಟೆ,  ಹೊದಿಗೆರೆಯ ಷಾಜಿ ರಾಜೆ ಬೋಸ್ಲೆ ರವರ ಸಮಾಧಿ ಸ್ಥಳ ಮುಂತಾದ ಸ್ಥಳಗಳು ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಲಾಗಿದೆ.ವಿಶೇಷವಾಗಿ ಸಂತೆಬೆನ್ನೂರಿನ ಪುಷ್ಕರಣಿಯಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯ, ಉದ್ಯಾನವನದ ಅಭಿವೃದ್ಧಿ ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಕೆಲಸವಾಗಬೇಕು‌. ದಾವಣಗೆರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲು ಅಗತ್ಯ ಸಹಕಾರ ಮತ್ತು ಅನುದಾನ ನೀಡಬೇಕು.  ದಾವಣಗೆರೆ ಜಿಲ್ಲೆಯಾಗಿ 25 ವರ್ಷ ಪೂರೈಸಿ ರಜತ ಸಂಭ್ರಮದಲ್ಲಿರುವ ಈ ಸಮಯದಲ್ಲಿ ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ಸಾಹಿತಿಒಳಗೊಂಡ ವಿಶೇಷ ಸಾಹಿತ್ಯ ಕಾರ್ಯಕ್ರಮವನ್ನು  ಜಿಲ್ಲಾಡಳಿತವು ಜಿಲ್ಲಾ ಕಸಾಪ ಸಹಯೋಗದೊಂದಿಗೆ ಆಯೋಜಿಸಿ ಜಿಲ್ಲೆಯ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.