ವಿಶ್ವ ಏಡ್ಸ್ ದಿನ ನಿಮಿತ್ತ ಕ್ಯಾಂಡಲ್ ಜಾಥಾ-2023


ಗದಗ,ಡಿ.3: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ, ಸೃಷ್ಠಿ ಸಂಕುಲ ಸಂಸ್ಥೆ, ನವಚೆತನ ಸಂಸ್ಥೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧೀ ವೃತ್ತದಲ್ಲಿ ವಿಶ್ವ ಏಡ್ಸ್ ದಿನದ ನಿಮಿತ್ಯ ಕ್ಯಾಂಡಲ್‍ಜಾಥಾ ಮತ್ತು ಮೌನ ಆಚರಣೆ ಕಾರ್ಯಕ್ರಮ ಜರುಗಿತು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್.ಐ.ವಿ. ಸೋಂಕಿನಿಂದ ಮರಣಹೊಂದಿದವರ ಸಂತಾಪ ಸೂಚಕವಾಗಿ ಶೋಕವ್ಯಕ್ತ ಪಡಿಸಲು ಹಾಗೂ ಅವರಿಗೆ ಚಿರಶಾಂತಿ ಕೋರಲು ಕ್ಯಾಂಡಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಸೋಂಕಿತರು ಎದೆಗುಂದದೆ ಮಾನಸಿಕ ಸ್ಥೈರ್ಯ ಮತ್ತು ಸದೃಢತೆಯಿಂದ ಜೀವನ ಸಾಗಿಸಲು ಸಂಘ ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಿ ಶ್ರಮಿಸಲು ತಿಳಿಸಿದರು. ಸರಕಾರಿ ಆಸ್ಪತ್ರೆಗಳಲ್ಲಿ ಐ.ಸಿ.ಟಿ.ಸಿ ಆಪ್ತ ಸಮಾಲೋಚಕರು ರೋಗಿಗಳಿಗೆ ನೈತಿಕ ಸ್ಥೈರ್ಯ ಮತ್ತು ಮಾನಸಿಕ ಬೆಂಬಲವನ್ನು ನೀಡಿ ಆಪ್ತ ಸಮಾಲೋಚನೆ ಮಾಡುತ್ತಿದ್ದು, ರೋಗಿಗಳು ಭಯ ಮುಕ್ತವಾಗಿ ಸಮಾಜದಲ್ಲಿ ಬದುಕಲು ಸಾಧ್ಯವಾಗಿದೆ. ಜೊತೆಗೆ ಹೆಚ್.ಐ.ವಿ. ಏಡ್ಸ್ ಮಸೂದೆ-2017 ಬದುಕಿಗೆ ಇನ್ನಷ್ಟು ಬಲ ನೀಡಿದೆ ಎಂದು ತಿಳಿಸಿದರು.
ಕ್ಯಾಂಡಲ್ ಜಾಥಾದಲ್ಲಿ ಎ.ಆರ್.ಟಿ. ಕೇಂದ್ರದ ಸಿಬ್ಬಂದಿ, ಐ.ಸಿ.ಟಿ.ಸಿ ಸಿಬ್ಬಂದಿ, ಡ್ಯಾಪ್ಕ್ಯೂ ಸಿಬ್ಬಂದಿ, ರಕ್ಷಣೆಜಿಲ್ಲಾ ಮಹಿಳಾ ಒಕ್ಕೂಟದ ಶ್ರೀಮತಿ ಹಜರತಬಿ ಹಾಗೂ ಸದಸ್ಯರು, ನವಚೇತನ ನೆಟ್‍ವರ್ಕ ಸಂಸ್ಥೆಯ ಕು. ರಾಧಾ ಹಾಗೂ ಸದಸ್ಯರು, ಸೃಷ್ಟಿ ಸಂಕುಲ ಸಂಸ್ಥೆಯ ಆದಿತ್ಯಾ ಹಾಗೂ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಎನ್.ಜಿ.ಓ. ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಸುಮಿತ್ರಾ ಮಾವಿನಕಾಯಿ ಪ್ರಾರ್ಥಿಸಿದರು, ಬಸವರಾಜ ಲಾಳಗಟ್ಟಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಬಡಿಗೇರ ವಂದಸಿದರು.