ವಿಶ್ವ ಏಡ್ಸ್ ದಿನಾಚರಣೆಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸಿಕೊಂಡು ಬರಲಾಗಿದೆ.ಇದು ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಹೀಗಾಗಿ ಸೋಂಕಿಗೊಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ನಾವೆಲ್ಲ ನಿಮ್ಮೊಟ್ಟಿಗಿದ್ದೇವೆ ಎಂಬ ಸಂಕಲ್ಪವನ್ನು ಮಾಡುವಂತಹ ಮಹತ್ವದ ದಿನ ಇದಾಗಿದೆ.

ಏಡ್ಸ್ ಸೋಂಕನ್ನು 1984 ರಲ್ಲಿ ಗುರುತಿಸಲಾಗಿದ್ದರೂ, 35 ಮಿಲಿಯನ್‌ಗಿಂತಲೂ ಹೆಚ್ಚು ಜನರು ಎಚ್‌ಐವಿ ಅಥವಾ ಏಡ್ಸ್-ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಡಿಸೆಂಬರ್ 1, 1988ರಲ್ಲಿ ಪ್ರಥಮ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ಯು.ಎನ್.ಏಡ್ಸ್ ಸಂಯುಕ್ತ ನೇತೃತ್ವದಲ್ಲಿ ಈ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲು ಮುಂದಾಯಿತು. ಎಚ್‌ಐವಿ/ಏಡ್ಸ್ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕೂಡಿಸುವುದಿಂದೇ ಅಲ್ಲದೆ ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಈ ಸೋಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಎಚ್‌ಐವಿ ಸೋಂಕಿತರಾಗಿರುವವರಿಗೆ ಬೆಂಬಲ ನೀಡುವುದು ಮತ್ತು ಅವರು ಅನುಭವಿಸುತ್ತಿರುವ ಕಳಂಕ ತಾರತಮ್ಯವನ್ನು ಕಡಿಮೆ ಮಾಡುವುದು ವಿಶ್ವದಲ್ಲಿನ ಎಚ್‌ಐವಿ ಏಡ್ಸ್ ಬೆಳವಣಿಗೆಯತ್ತ ದೃಷ್ಟಿ ಬೀರಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬರ ಗಮನ ಸೆಳೆಯುವುದೇ ಧ್ಯೇಯವಾಗಿದೆ.

ಆರಂಭದಲ್ಲಿ ವಿಶ್ವ ಏಡ್ಸ್ ದಿನವು ಕುಟುಂಬಗಳ ಮೇಲೆ ಏಡ್ಸ್ ಪ್ರಭಾವದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ತರಲು ಮಕ್ಕಳು ಮತ್ತು ಯುವಕರ ಮೇಲೆ ಹೆಚ್ಚು ಕೇಂದ್ರೀಕರಿಸಿತ್ತು. 1996 ರಿಂದ, ವಿಶ್ವ ಏಡ್ಸ್ ದಿನದ ಕಾರ್ಯಾಚರಣೆಗಳನ್ನು ವಿಶ್ವಸಂಸ್ಥೆ ವಹಿಸಿಕೊಂಡಿದೆ. ಇದು ಯೋಜನೆಯ ವ್ಯಾಪ್ತಿಯನ್ನು ವರ್ಷಪೂರ್ತಿ ತಡೆಗಟ್ಟುವಿಕೆ ಮತ್ತು ಶಿಕ್ಷಣ ಅಭಿಯಾನಕ್ಕೆ ವಿಸ್ತರಿಸಿದೆ.

ದೇಶದಲ್ಲಿ ಹೆಚ್ಚು ಏಡ್ಸ್ ಸೋಂಕಿರುವ ರಾಜ್ಯಗಳಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಹೆಚ್ಐವಿ ಸೋಂಕು ಹೆಚ್ಚಿರುವ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಕರ್ನಾಟಕವು 1998 ರಿಂದ ಹೆಚ್​ಐವಿ ಕಣ್ಗಾವಲು ಸಮೀಕ್ಷೆಯನ್ನು ನಡೆಸುತ್ತಿದೆ. ವಯಸ್ಕರಲ್ಲಿನ ಹೆಚ್‌ಐವಿ ಹರಡುವಿಕೆಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಪ್ರಮುಖವಾಗಿ ಗರ್ಭಿಣಿಯರಲ್ಲಿ ಎಚ್ಐವಿ ಸೋಂಕು 0.04 ಗೆ ಇಳಿದಿರುವುದು 2019-20ರ ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿನ ಅಂಕಿ ಅಂಶಗಳಿಂದ ರುಜುವಾತಾಗಿದೆ.

ಪ್ರತೀ ವರ್ಷದ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಏಡ್ಸ್ ದಿನದ 2021 ರ ಥೀಮ್ “ಅಸಮಾನತೆಯೊಂದಿಗೆ ಏಡ್ಸ್ ಅನ್ನು ಕೊನೆಗೊಳಿಸಿ”. ಆರೋಗ್ಯ ಸೇವೆಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಮಟ್ಟ ಬಲಪಡಿಸುವುದನ್ನು ತಿಳಿಸುವ ಉದ್ದೇಶವಾಗಿದೆ. ಎಚ್‌ಐವಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಜಾಗೃತಿ ಮೂಡಿಡುವುದು ಮುಖ್ಯ ಗುರಿಯಾಗಿದೆ.