ವಿಶ್ವ ಅಪ್ಪಂದಿರ ದಿನ


ಪ್ರತಿ ವರ್ಷ ಜೂನ್ ತಿಂಗಳಿನ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಜೂನ್ ೧೯ರಂದು ಫಾದರ್ಸ್ ಡೇ ಆಚರಿಸಲಾಗುತ್ತಿದೆ.
1910ರಲ್ಲಿ ವಾಷಿಂಗ್ಟನ್ನಲ್ಲಿ ಮೊದಲ ಬಾರಿಗೆ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಅಮೆರಿಕದ ಸಿವಿಲ್ ವಾರ್ನಲ್ಲಿ ಪಾಲ್ಗೊಂಡಿದ್ದ ವಿಲಿಯಂ ಜಾಕ್ಸನ್ ಸ್ಮಾರ್ಟ್ ಅವರ ಮಗಳು ಸೊನೊರಾ ಸ್ಮಾರ್ಟ್ ಡಾಡ್ ತನ್ನ ತಂದೆಯ ಹುಟ್ಟು ಹಬ್ಬವನ್ನು ಮೊದಲು ಬಾರಿಗೆ ಆಚರಿಸಿದರು ಎಂದು ಹೇಳಲಾಗಿದೆ.
ಅಂದಿನಿಂದ ವಿಶ್ವ ಅಪ್ಪಂದಿರ ದಿನವನ್ನು 11 ದೇಶಗಳು ಆಚರಿಸುತ್ತಾ ಬಂದಿವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಸೆಪ್ಟೆಂಬರ್ ತಿಂಗಳಿನ ಮೊದಲ ಭಾನುವಾರ ಫಾದರ್ಸ್ ಡೇ ಆಚರಿಸಲಾಗುತ್ತದೆ. ಬ್ರೆಜಿಲ್ನಲ್ಲಿ ಆಗಸ್ಟ್ ಎರಡನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ.ಮಕ್ಕಳು ಮತ್ತು ಅಪ್ಪನ ನಡುವಿನ ಬಾಂಧವ್ಯದ ಸಂಕೇತವಾಗಿ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಸ್ಪೇನ್ ಮತ್ತು ಪೋರ್ಚುಗಲ್ನಂತಹ ದೇಶಗಳು ಮಾರ್ಚ್ 19ರಂದು ಸೇಂಟ್ ಜೋಸೆಫ್ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್ನಲ್ಲಿ ಆಗಸ್ಟ್ 8ರಂದು ಹಾಗೂ ಥೈಲಾಂಡ್ನಲ್ಲಿ ಡಿಸೆಂಬರ್ 5ರಂದು ಆಚರಿಸಲಾಗುತ್ತದೆ.
ಅಮೆರಿಕದಲ್ಲಿ ಭೀಕರವಾದ ಅಪಘಾತವೊಂದು ಅಪ್ಪನ ದಿನಾಚರಣೆಗೆ ನಾಂದಿ ಹಾಡಿತು. ಹೌದು, 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಈ ಪೈಕಿ ಓರ್ವರ ಮಗಳು ಗ್ರೇಸ್ ಗೋಲ್ಡನ್ ಕ್ಲೇಟನ್ ಎಂಬಾಕೆ, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದ್ದಳು. ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್ ಡಾಡ್ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ತಂದೆಯ ದಿನಾಚರಣೆಯನ್ನು ಜೂನ್ ತಿಂಗಳ ಮೂರನೇ ಭಾನುವಾರ ಆಚರಿಸುವ ಬಗ್ಗೆ ಘೋಷಣೆ ಹೊರಡಿಸಿದ ಬಳಿಕ ಅಮೆರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ತದ ನಂತರ ಜೂನ್ ತಿಂಗಳ ಮೂರನೇ ಭಾನುವಾರ ಅಮೆರಿಕ, ಭಾರತ ಸೇರಿ ವಿವಿಧ ದೇಶಗಳಲ್ಲಿ ಅಪ್ಪಂದಿರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕುಟುಂಬದಲ್ಲಿ ತಂದೆಯ ಕೊಡುಗೆಯನ್ನು ಅರಿತುಕೊಳ್ಳುವ ಮತ್ತು ಗೌರವಿಸುವ ಉದ್ದೇಶದಿಂದ ತಂದೆಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಇದು ಪಿತೃತ್ವ, ಪಿತೃ ಬಂಧಗಳು ಮತ್ತು ಪುರುಷ ಪೋಷಕರು ತಮ್ಮ ಕುಟುಂಬ ಮತ್ತು ಅವರ ಮಕ್ಕಳಿಗಾಗಿ ಮಾಡಿದ ಕಾರ್ಯಗಳನ್ನು ಸ್ಮರಿಸುವ ದಿನ. ಅವರ ತ್ಯಾಗಕ್ಕೂ ಗೌರವ ಕೊಡುವ ದಿನ ಎಂದೇ ಈ ದಿನ ಖ್ಯಾತಿ ಪಡೆದಿದೆ. ಅಂದು ಅನೇಕ ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಕಾರ್ಯಕ್ರಮ ನಡೆಸುತ್ತಾರೆ