ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ಚಾರಿತ್ರಿಕ ಸಾಧನೆ; ನೀರಜ್‌ಗೆ ಬೆಳ್ಳಿ

ಒರೆಗಾನ್ (ಅಮೆರಿಕ), ಜು.೨೪- ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದು, ಭಾರತೀಯರ ಗಮನ ಸೆಳೆದಿದ್ದ ನೀರಜ್ ಛೋಪ್ರಾ ಇದೀಗ ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ತನ್ನ ಪ್ರಖರತೆ ಪ್ರದರ್ಶಿಸಿದ್ದಾರೆ. ಭಾರತೀಯ ಕಾಲಮಾನ ಇಂದು ಬೆಳಗ್ಗೆ ನಡೆದ ಜಾವೆಲಿನ್ ಥ್ರೋ ವಿಭಾಗದ ಫೈನಲ್‌ನಲ್ಲಿ ಛೋಪ್ರಾ ಬೆಳ್ಳಿಯ ಪದಕಕ್ಕೆ ಕೊರಳೊಡ್ಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಚಿನ್ನದ ಪದಕ ತಪ್ಪಿದರೂ ಇತ್ತ ಬೆಳ್ಳಿಯ ಪದಕ ಗೆಲ್ಲುವ ಮೂಲಕ ಛೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ೨೦೦೩ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಂಜು ಬಾಂಬಿ ಜಾರ್ಜ್ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಮೊದಲ ಭಾರತೀಯಳಾಗಿ ಸಾಧನೆ ಪ್ರದರ್ಶಿಸಿದ್ದರು. ಇನ್ನು ಸ್ಪರ್ಧೆಯಲ್ಲಿ ಮೂರು ಬಾರಿ ೯೦ ಮೀಟರ್ ಗುರಿ ಸಾಧಿಸಿದ್ದ ಗ್ರೆನಡಾದ ಆಂಡರ್‍ಸ್ ಪೀಟರ್ಸ್ ಅವರು ಚಿನ್ನದ ಪದಕ ಪಡೆದುಕೊಂಡರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದುಕೊಂಡಿದ್ದ ಜೆಕ್ ಗಣರಾಜ್ಯದ ಜಾಕೋಬ್ ವಡ್ಲೆಚ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಟೋಕಿಯೋ ಒಲಿಂಪಿಕ್ಸ್‌ಗೆ ಹೋಲಿಕೆ ಮಾಡಿದರೆ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಛೋಪ್ರಾ ಆರಂಭಿಕ ಹಂತದಲ್ಲೇ ಆಘಾತ ಕಂಡರು. ೧೨ ಮಂದಿ ಸ್ಪರ್ಧಿಗಳ ಪೈಕಿ ಛೋಪ್ರಾ ತನ್ನ ಮೊದಲ ಯತ್ನದಲ್ಲಿ ಫೌಲ್‌ಗೆ ಒಳಗಾಗಿದ್ದರು. ಆದರೂ ನಂತರದ ಪ್ರಯತ್ನದಲ್ಲಿ ಉತ್ತಮ ನಿರ್ವಹಣೆ ನೀಡಿದರೂ ಎದುರಾಳಿ ಆಂಡರ್‍ಸ್ ಅವರ ೯೦ ಮೀ. ಗುರಿ ಭೇದಿಸಲು ಸಾಧ್ಯವಾಗಲಿಲ್ಲ. ನಾಲ್ಕನೇ ಪ್ರಯತ್ನದಲ್ಲಿ ಛೋಪ್ರಾ ಅವರು ೮೮.೧೩ ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಎರಡನೇ ಸ್ಥಾನಕ್ಕೆ ಜಿಗಿದರು. ಐದನೇ ಯತ್ನದಲ್ಲಿ ಮತ್ತೆ ಫೌಲ್ ಆದರೂ ಎರಡನೇ ಸ್ಥಾನ ಕಾಪಾಡಿಕೊಂಡರು. ಪೀಟರ್ಸ್ ಗ್ರೆನೇಡಾ ಮೊದಲ ಯತ್ನದಲ್ಲೇ ೯೦.೨೧ ಮೀಟರ್ ಗಳೊಂದಿಗೆ ಅಗ್ರಸ್ಥಾನ ಪಡೆದರು. ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದ ಪೀಟರ್ಸ್ ಕೊನೆಯ ಯತ್ನದಲ್ಲಿ ೯೦.೫೪ ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ನೀರಜ್ ಛೋಪ್ರಾ ಅವರ ಜೀವಮಾನದ ಅತ್ಯುತ್ತಮ ಸಾಧನೆ ೮೯.೯೪ ಮೀಟರ್ ಆಗಿದ್ದು, ಸ್ಟಾಕ್‌ಹೋಂ ಡೈಮಂಡ್ ಲೀಗ್‌ನಲ್ಲಿ ಈ ದಾಖಲೆ ಸ್ಥಾಪಿಸಿದ್ದರು. ಅಂಜು ಬಾಬಿ ಜಾರ್ಜ್ ಬಳಿಕ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ದಾಖಲೆಗೆ ನೀರಜ್ ಛೋಪ್ರಾ ಪಾತ್ರರಾದರು. ಭಾರತದ ರೋಹಿತ್ ಯಾದವ್ ೭೮.೭೨ ಮೀಟರ್‌ನೊಂದಿಗೆ ೧೦ನೇ ಸ್ಥಾನ ಪಡೆದರು. ೮೮.೦೯ ಮೀಟರ್ ಎಸೆದ ಜೆಕ್ ಗಣರಾಜ್ಯದ ಜಾಕೋಬ್ ವಡ್ಲೆಚ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಜರ್ಮನಿಯ ಜೂಲಿಯನ್ ವೆಬೆರ್ ನಾಲ್ಕನೇ ಸ್ಥಾನ ಪಡೆದರು.

ಪ್ರಧಾನಿ ಮೋದಿ ಅಭಿನಂದನೆ
ಅತ್ತ ನೀರಜ್ ಛೋಪ್ರಾ ಬೆಳ್ಳಿಯ ಪದಕ ಗೆದ್ದುಕೊಂಡ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, ನಮ್ಮ ಅತ್ಯಂತ ಪ್ರತಿಷ್ಠಿತ ಕ್ರೀಡಾಪಟುಗಳಲ್ಲಿ ಒಬ್ಬರಿಂದ ಉತ್ತಮ ಸಾಧನೆಯಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕವನ್ನು ಗೆದ್ದಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಭಾರತೀಯ ಕ್ರೀಡೆಗಳಿಗೆ ವಿಶೇಷ ಕ್ಷಣವಾಗಿದೆ ಎಂದಿದ್ದಾರೆ.