ವಿಶ್ವ ಅಂಚೆ ದಿನ

ಪ್ರತಿ ವರ್ಷ ಅಕ್ಟೋಬರ್ ೯ನೇ ತಾರೀಕಿನಂದು ವಿಶ್ವ ಅಂಚೆ ದಿನವೆಂದು ಆಚರಿಸಲಾಗುತ್ತದೆ. ಅದೊಂದು ಕಾಲವಿತ್ತು. 1980ರ ದಶಕ ಹಾಗೂ ಅದಕ್ಕೂ ಮುನ್ನ ಹುಟ್ಟಿದವರಿಗೆ ತುಂಬಾ ಚನ್ನಾಗಿ ಗೊತ್ತಿರುವ ಕಾಲವದು. ಆ ಕಾಲದಲ್ಲಿ ಅಂಚೆಗಿದ್ದ ಮಹತ್ವ, ಇವತ್ತಿನ ವಾಟ್ಸಪ್ಪಿಗೂ ಇಲ್ಲ, ವಿಡಿಯೋ ಕಾಲ್‌ ಗೂ ಇಲ್ಲ! ಊರಿಗೊಂದು ಪೋಸ್ಟ್‌ ಆಫೀಸ್‌ ಇದ್ದರೆ ಅದೇ ದೊಡ್ಡ ಹೆಮ್ಮೆ

ಇಂದು ನಾವು ಮೊಬೈಲ್ ಫೋನ್‌ಗಳು , ಇ-ಮೇಲ್‌ಗಳು ಮತ್ತು ಫ್ಯಾಕ್ಸ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ಆದರೂ ಕೂಡ ಇಂದಿಗೂ ಅಂಚೆ ಭಾರತದ ಪ್ರಮುಖ ಸಂವಹನ ವಿಧಾನಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ಪುರಾಣ ಕಾಲದಲ್ಲಿ ಮೇಘ ಸಂದೇಶ, ಮಹಾರಾಜರ ಕಾಲದ ಪಾರಿವಾಳ ಸಂದೇಶದ ಆಧುನಿಕ ಜಗತ್ತಿಗೆ ಕಾಲಿಡುವ ಹಂತದಲ್ಲಿ ಅಂಚೆ ಸಂದೇಶ ಜನರನ್ನು ಬೆಸೆಯುವ ಕಾರ್ಯ ಮಾಡಿದೆ. ಹೀಗೆ ಕಾಲಕಾಲಕ್ಕೆ ತಕ್ಕಂತೆ ಮಾರ್ಪಾಡು ಹೊಂದಿಕೊಳ್ಳುತ್ತಾ, ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡು ಇಂದಿಗೂ ಜೀವಂತವಾಗಿ ಜನಮಾನಸದಲ್ಲಿ ಅಂಚೆ ವ್ಯವಸ್ಥೆ ಉಳಿದುಕೊಂಡಿದೆ. ಅನಾದಿಕಾಲದಿಂದಲೂ ಜನಜೀವನದ ಭಾಗವಾಗಿ ಬಂದಿರುವ ಅಂಚೆ ವ್ಯವಸ್ಥೆಯ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ಪ್ರತಿ ವರ್ಷವೂ ಅಕ್ಟೊಬರ್ 9ರಂದು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ. ದಶಕಗಳ ಹಿಂದೆ ಸಂದೇಶಗಳನ್ನು, ಪತ್ರ, ಡ್ರಾಫ್ಟ್­ಗಳನ್ನು, ಚೆಕ್ ಮತ್ತು ಇತರ ಪ್ರಮುಖ ಮಾಹಿತಿಯನ್ನು ಕಳುಹಿಸಲು ಜನರು ಅಂಚೆಯನ್ನು ಹೆಚ್ಚಾಗಿ ಅವಲಂಬಿಸಿದ್ದರು.

1874ರಲ್ಲಿ ಸ್ವಿಟ್ಜರ್​​​ಲ್ಯಾಂಡ್​​ಬನ ಬರ್ನ್​​ನಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್(ಯುಪಿಯು) ಸ್ಥಾಪನೆಯ ನೆನಪಿಗಾಗಿ ಅಕ್ಟೋಬರ್​​​​​ 9ನ್ನು ವಿಶ್ವ ಪೋಸ್ಟ್​​ ದಿನವನ್ನಾಗಿ ಆಚರಿಸಲಾಗುತ್ತಿದೆ. 1969ರಲ್ಲಿ ಜಪಾನ್​​ನ ಟೋಕಿಯೋದಲ್ಲಿ ​​ ಈ ದಿನವನ್ನು ವಿಶ್ವ ಅಂಚೆ ದಿನವನ್ನಾಗಿ ಘೋಷಿಸಲಾಯಿತು. ಅಂಚೆ ಹಳೆಯ ಸಂವಹನ ವಿಧಾನವಾಗಿದೆ. ಈಗ ಎಷ್ಟೇ ಹೊಸ ಸಂವಹನಗಳು ಬಂದರೂ ಸಹ ಹಳೆಯ ಅಂಚೆ ವಿಧಾನ ಬಹಳ ವಿಶಿಷ್ಟವಾಗಿದೆ. ಅಕ್ಷರಗಳನ್ನು ವಿನಿಮಯ ಮಾಡಿಕೊಳ್ಳುವ ವಿಧಾನವಾಗಿದೆ. ಎಷ್ಟೇ ಆಧುನಿಕತೆಗೆ ಹೊಂದಿಕೊಂಡರೂ ಅಂಚೆ ಶೈಲಿಯನ್ನು ಜನರು ಇಷ್ಟಪಡುತ್ತಾರೆ. ವಿಶ್ವ ಪೋಸ್ಟ್​ ದಿನವನ್ನು ಪ್ರತೀ ವರ್ಷ ಅಕ್ಟೋಬರ್ 9ರಂದು ಆಚರಿಸಲಾಗುತ್ತದೆ. ಈ ದಿನವನ್ನು 1874ರಲ್ಲಿ ಯುನಿವರ್ಸಲ್​ ಯೂನಿಯನ್ ಸ್ಥಾಪನೆಯ ವಾರ್ಷಿಕೋತ್ಸವ ಎಂದು ಗುರುತಿಸಲಾಗಿದೆ.

ವಿಶ್ವ ಅಂಚೆ ದಿನವು 1840ರಿಂದ ಇತಿಹಾಸವನ್ನು ಹೊಂದಿದೆ. ಇಂಗ್ಲೆಂಡ್​ನಲ್ಲಿ ಸರ್ ರೋಲ್ಯಾಂಡ್ ಹಿಲ್ ಅವರು ಅಂದು ಒಂದು ಹೊಸ ವ್ಯವಸ್ಥೆಯನ್ನು ತಂದಿದ್ದರು. ಅದರ ಮೂಲಕ ಅಕ್ಷರಗಳ ಅಂಚೆಯನ್ನು ಪ್ರೀಪೇಯ್ಡ್​ ಮಾಡಬೇಕಾಗಿತ್ತು. ದೇಶೀಯ ಸೇವೆಯಲ್ಲಿ ಒಂದು ನಿರ್ದಿಷ್ಟ ಶ್ರೇಣಿಯ ತೂಕವನ್ನು ಹೊಂದಿರುವ ಎಲ್ಲಾ ಅಕ್ಷರಗಳಿಗೆ ಒಂದೇ ದರವನ್ನು ವಿಧಿಸಲಾಗುವುದು ಎಂದು ಹೇಳುವ ಮೂಲಕ ಅವರು ವಿಶ್ವದ ಮೊದಲ ಅಂಚೆ ಚೀಟಿಯನ್ನು ಪರಿಚಯಿಸಿದ್ದರು. ಬರ್ನ್‌ನಲ್ಲಿ (1874), ಉತ್ತರ ಜರ್ಮನ್ ಒಕ್ಕೂಟದ ಹಿರಿಯ ಅಂಚೆ ಅಧಿಕಾರಿ ಹೆನ್ರಿಕ್ ವಾನ್ ಸ್ಟೀಫನ್ ಅವರು ಅಂತರರಾಷ್ಟ್ರೀಯ ಅಂಚೆ ಒಕ್ಕೂಟಕ್ಕಾಗಿ ಯೋಜನೆಯನ್ನು ರೂಪಿಸಿದರು. ಅವರ ಸಲಹೆಯ ಆಧಾರದ ಮೇಲೆ, ಸ್ವಿಸ್ ಸರ್ಕಾರವು 1874 ರ ಸೆಪ್ಟೆಂಬರ್ 15 ರಂದು ಬರ್ನ್‌ನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ನಡೆಸಿತು, ಇದರಲ್ಲಿ 22 ರಾಷ್ಟ್ರಗಳು ತಮ್ಮ ಪ್ರತಿನಿಧಿಗಳು ಭಾಗವಹಿಸಿದ್ದರು.

ಅದೇ ವರ್ಷದ ಅಕ್ಟೋಬರ್ 9 ರಂದು, ಜನರಲ್ ಅಂಚೆ ಒಕ್ಕೂಟವನ್ನು ಸ್ಥಾಪಿಸುವ ಮೂಲಕ ವಿಶ್ವ ಅಂಚೆ ದಿನವನ್ನು ಪ್ರಾರಂಭಿಸಲಾಯಿತು. 1878 ರಲ್ಲಿ ಇದರ ಹೆಸರನ್ನು ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಎಂದು ಬದಲಾಯಿಸಲಾಯಿತು. 1874 ರಲ್ಲಿ ಸಹಿ ಹಾಕಿದ ಬರ್ನ್ ಒಪ್ಪಂದವು ಅಂತಾರಾಷ್ಟ್ರೀಯ ಅಂಚೆ ಸೇವೆಗಳು ಮತ್ತು ನಿಬಂಧನೆಗಳನ್ನು ವಹಿವಾಟು ಮತ್ತು ಪತ್ರಗಳ ವಿನಿಮಯಕ್ಕಾಗಿ ಒಂದೇ ಅಂಚೆ ಪ್ರದೇಶವಾಗಿ ಸುವ್ಯವಸ್ಥಿತಗೊಳಿಸುವಲ್ಲಿ ಯಶಸ್ವಿಯಾಯಿತು.

ಭಾರತದಲ್ಲಿ ಅಂಚೆ ವ್ಯವಸ್ಥೆ
ಭಾರತದಲ್ಲಿ ಸುಧಾರಿತ ಅಂಚೆ ಪದ್ದತಿಯನ್ನು ಜಾರಿಗೆ ತಂದವರು ಬ್ರಿಟೀಷರು. ವಸಹಾತು ನೆಲೆಗಳಿಂದ ಲಂಡನ್‌ ಗೆ ಮಾಹಿತಿ ವಿನಿಮಯ ಮಾಡಲು ಅಂಚೆ ಅವಶ್ಯವಾಗಿದ್ದ ಕಾರಣ ಈ ವ್ಯವಸ್ಥೆಯನ್ನು ಭಾರತದಲ್ಲಿ ಪರಿಣಾಮಕಾರಿಯಾಗಿ ಬೆಳೆಸಲು ಅವರು ಆಸಕ್ತಿ ತೋರಿದರು. ಅದಕ್ಕೂ ಮುನ್ನ ಭಾರತದಲ್ಲಿ ಚಕ್ರಾಧಿಪತಿಗಳ ಕಾಲದಲ್ಲಿ ಪಾರಿವಾಳ, ಕುದುರೆ, ಸೇನಾಭಟರ ಮೂಲಕ ಪತ್ರ, ತಾಳೆ ಗರಿಗಳ ರೂಪದಲ್ಲಿ ರವಾನೆಯಾಗುತ್ತಿತ್ತು. ಆಂಗ್ಲರ ಆಗಮನದ ಬಳಿಕ ಅಕ್ಷರ ರೂಪದ ಮುದ್ರಿತ ದಾಖಲೆ ಪತ್ರವಾಗಿ ಅಂಚೆ ಬದಲಾಯಿತು. ಭರತ ಖಂಡಕ್ಕೆ ಅಂಚೆ ವ್ಯವಸ್ಥೆಯನ್ನು ಪರಿಚಯಿಸಿದ ಕೀರ್ತಿ ಲಾರ್ಡ್‌ ಕ್ಲೈವ್‌ ಗೆ ಸೇರುತ್ತದೆ.

ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ ಮತ್ತು ಇದರ 1,55,000 ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಮಗೆ ಅಂಚೆ ಕಛೇರಿ ಕಾಣಸಿಗುತ್ತದೆ. ಇದರಿಂದಾಗಿಯೇ ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿದೆ. ಅಂಚೆ ಸೇವೆ ಭಾರತದ ಅವಿಭಾಜ್ಯ ಅಂಗವಾಗಿದೆ. ಗಡಿ ಕಾಯುವ ಯೋಧನ ಪತ್ರವನ್ನು ಆತನ ಕುಟುಂಬಿಕರಿಗೆ ತಂದು ತಲುಪಿಸುವುದರಿಂದ ಹಿಡಿದು, ರೈತನೊಬ್ಬ ಪಟ್ಟಣದಲ್ಲಿ ಓದುತ್ತಿರುವ ತನ್ನ ಮಗನಿಗೆ ಮನಿ ಆರ್ಡರ್ ಮಾಡುವವರೆಗೆ ಭಾರತ ಮತ್ತು ಭಾರತೀಯರನ್ನು ಒಂದುಗೂಡಿಸುವಲ್ಲಿ ಅಂಚೆ ಸೇವೆಗಳು ಮಹತ್ವದ ಪಾತ್ರವನ್ನು ನಿಭಾಯಿಸಿವೆ.

1839ರಲ್ಲಿ ಭಾರತದಲ್ಲಿ ಅಂಚೆ ತಂತಿಯ ಉದಯವಾಯಿತು. ಕಲ್ಕತ್ತೆಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದ ವಿಲಿಯಂ ಷಾಂಘ್ನೆಸ್ಸಿ ಎಂಬಾತ ಕಲ್ಕತ್ತೆಯಿಂದ ಡೈಮಂಡ್ ಹಾರ್ಬರಿಗೆ ಹಾಕಿದ ಪ್ರಾಯೋಗಿಕ ತಂತಿ ಮಾರ್ಗವೇ ದೇಶದ ಮೊದಲ ದೂರವಾಣಿ ತಂತಿ ಸಂದೇಶವೆಂದು ಇತಿಹಾಸದಲ್ಲಿ ದಾಖಲಾಗಿದೆ.