ವಿಶ್ವಾಸಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಲು ಕರೆ

ಹುಬ್ಬಳ್ಳಿ,ಫೆ14 : ಸುರಕ್ಷತೆಯ ನಂಬಿಕೆಯಿಂದ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಗೋಕುಲ ರಸ್ತೆಯಲ್ಲಿರುವ ಹುಬ್ಬಳ್ಳಿ ಗ್ರಾಮಾಂತರ 2ನೇ ಘಟಕದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಹಾಗೂ ಇಂಧನ ಉಳಿತಾಯ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಸಂಸ್ಥೆಯ ಮೇಲಿನ ಸುರಕ್ಷತೆಯ ನಂಬಿಕೆಯಿಂದ ನಮ್ಮ ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಅದಕ್ಕೆ ಧಕ್ಕೆಯಾಗದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು.ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ನಮ್ಮ ಬಸ್ಸುಗಳಲ್ಲಿ ಸಂಚರಿಸುವ ಭಾವನೆ ಬರುವಂತೆ ಕರ್ತವ್ಯ ಪರತೆ ಬೆಳೆಸಿಕೊಳ್ಳಬೇಕು. ಹಾಗೂ ಇಂಧನ ಮಿತವ್ಯಯ ಸಾಧಿಸಲು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಉತ್ತರ ಸಂಚಾರ ವಿಭಾಗದ ಸಿಪಿಐ ರಮೇಶ್ ಗೋಕಾಕ್ ಮಾತನಾಡಿ ರಸ್ತೆ ಸುರಕ್ಷತೆಯಲ್ಲಿ ಸಂಚಾರ ನಿಯಮಗಳ ಪಾಲನೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ವಾಹನ ಚಾಲನೆಯಲ್ಲಿ ಮದ್ಯಪಾನ ಹಾಗೂ ಮೊಬೈಲ್ ಬಳಕೆ ಅತ್ಯಂತ ಅಪಾಯಕಾರಿಯಾಗಿದ್ದು ಜೀವಕ್ಕೇ ಸಂಚಕಾರ ತರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚಾಲಕರು ಅದಕ್ಕೆ ಅವಕಾಶ ನೀಡಬಾರದು.ರಸ್ತೆಯಲ್ಲಿ ಇತರೆ ವಾಹನಗಳ ಸವಾರರು,ಪಾದಚಾರಿಗಳು ಮತ್ತಿತರ ರಸ್ತೆ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಏಕಾಗ್ರತೆಯಿಂದ ಹಾಗೂ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಇದರಿಂದ ಬಹಳಷ್ಟು ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್. ಗುಡೆಣ್ಣನವರ, ಡಿಪೆÇೀ ಮ್ಯಾನೇಜರ್ ರೋಹಿಣಿ ಬೆವಿನಕಟ್ಟಿ, ಬಿ.ಕೆ.ನಾಗರಾಜ,ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಮತ್ತಿತರರು ಇದ್ದರು.