
ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ), ಆ.೧೧- ಈಗಾಗಲೇ ಬಹುಹಂತದ ಕ್ಷಿಪಣಿ ಪರೀಕ್ಷೆಗಳ ಮೂಲಕ ನೆರೆ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿರುವ ಉತ್ತರ ಕೊರಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಗತಿ ಹೊರಬಿದ್ದಿದೆ. ಉತ್ತರ ಕೊರಿಯಾವು ೨೦೨೩ ರಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಮತ್ತು ಪರಮಾಣು ಫಿಸ್ಸೈಲ್ ವಸ್ತುಗಳನ್ನು ಉತ್ಪಾದಿಸುವುದನ್ನು ಮುಂದುವರೆಸಿದೆ. ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳಿಗೆ ಹಣವನ್ನು ಕಡಿತಗೊಳಿಸುವ ಗುರಿ ಹೊಂದಿರುವ ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಉತ್ತರ ಕೊರಿಯಾ ತಪ್ಪಿಸುತ್ತಿದೆ ಎಂದು ವಿಶ್ವಸಂಸ್ಥೆ (ಯುಎನ್)ಯ ಅಪ್ರಕಟಿತ ವರದಿ ತಿಳಿಸಿದೆ.
೨೦೨೨ ರಲ್ಲಿ ೧.೭ ಶತಕೋಟಿ ಡಾಲರ್ ಮೊತ್ತದ ದಾಖಲೆಯ ಮಟ್ಟದ ಸೈಬರ್ ಕಳ್ಳತನದ ನಂತರ ಉತ್ತರ ಕೊರಿಯಾದ) ಹ್ಯಾಕರ್‌ಗಳು ಜಾಗತಿಕವಾಗಿ ಸೈಬರ್ ಕ್ರಿಪ್ಟೋಕರೆನ್ಸಿ ಮತ್ತು ಇತರ ಹಣಕಾಸು ವಿನಿಮಯವನ್ನು ಯಶಸ್ವಿಯಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದೂ ಅಲ್ಲದೆ ಈ ಹಿಂದೆ ಉತ್ತರ ಕೊರಿಯಾ ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಸಹಾಯ ಮಾಡಲು ಸೈಬರ್ ದಾಳಿಗಳನ್ನು ಬಳಸುತ್ತಿದೆ ಎಂದು ಕೂಡ ವರದಿಯಲ್ಲಿ ಆರೋಪಿಸಿದೆ. ಆದರೆ ಅತ್ತ ಹ್ಯಾಕಿಂಗ್ ಅಥವಾ ಇತರ ಸೈಬರ್ ದಾಳಿಯ ಆರೋಪಗಳನ್ನು ಉತ್ತರ ಕೊರಿಯಾ ನಿರಾಕರಿಸಿದೆ. ಇದಕ್ಕೂ ಮುನ್ನ ಗುರುವಾರ ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ತಮ್ಮ ದೇಶದ ಮಿಲಿಟರಿಯ ಉನ್ನತ ಜನರಲ್ ಅನ್ನು ಬದಲಾಯಿಸಿದರು. ಅಲ್ಲದೆ ಯುದ್ಧದ ಸಾಧ್ಯತೆ, ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಉತ್ತೇಜನ ಮತ್ತು ಮಿಲಿಟರಿ ಡ್ರಿಲ್‌ಗಳ ವಿಸ್ತರಣೆಗೆ ಹೆಚ್ಚಿನ ಸಿದ್ಧತೆಗಳಿಗೆ ಕರೆ ನೀಡಿದರು ಎಂದು ರಾಜ್ಯ ಮಾಧ್ಯಮ ಕೆಸಿಎನ್‌ಎ ವರದಿ ಮಾಡಿದೆ.