
ಇಸ್ಲಾಮಾಬಾದ್, ಮೇ.೭-ವಿಶ್ವಸಂಸ್ಥೆಯ ನಿರ್ಷಯಗಳ ಅನುಸಾರ ಭಾರತ ಹಾಗೂ ಪಾಕಿಸ್ತಾನದ ನಡುವಣ ಕಾಶ್ಮೀರದ ವಿವಾದವನ್ನು ಬಗೆಹರಿಸಬೇಕೆಂದು ಚೀನಾ ಹೇಳಿದೆ.ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ೨ ದಿನಗಳ ಭೇಟಿಗೆ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇದು ಪಾಕಿಸ್ತಾನಕ್ಕೆ ಅವರ ಮೊದಲ ಪ್ರವಾಸವಾಗಿದೆ. ಅವರು ತಮ್ಮ ಪಾಕಿಸ್ತಾನದ ಸಹವರ್ತಿ ಬಿಲಾವಲ್ ಭುಟ್ಟೋ ಜರ್ದಾರಿ ಅವರೊಂದಿಗೆ ಸಭೆ ನಡೆಸಿದ ವೇಳೆ ಚೀನಾದಿಂದ ಈ ಹೇಳಿಕೆ ಹೊರಬಿದ್ದಿದೆ.ಕಾಶ್ಮೀರದ ವಿವಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಅನೇಕ ವರ್ಷಗಳಿಂದಲೇ ಉಳಿದುಕೊಂಡಿದೆ. ಇದನ್ನು ವಿಶ್ವಸಂಸ್ಥೆಯ ಚಾರ್ಟರ್, ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳು ಹಾಗೂ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಸರಿಯಾಗಿ ಹಾಗೂ ಶಾಂತಿಯುತವಾಗಿ ಪರಿಹರಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವರು ಹೇಳಿದ್ದಾರೆ. ಆದರೆ ಅಸ್ಥಿರ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವ ಏಕಪಕ್ಷೀಯ ಕ್ರಮಗಳಿಗೆ ಎರಡೂ ದೇಶಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.ರಾಜಕೀಯ, ಕಾರ್ಯತಂತ್ರ, ಆರ್ಥಿಕ, ರಕ್ಷಣಾ ಭದ್ರತೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳು ಹಾಗೂ ಸಹಕಾರಗಳ ಬಗ್ಗೆ ಚರ್ಚಿಸಲಾಗಿದೆ. ಉಭಯ ದೇಶಗಳ ಪರಸ್ಪರ ಹಿತಾಸಕ್ತಿ, ಪ್ರಾದೇಶಿಕ ಹಾಗೂ ಜಾಗತಿಕ ವಿಷಗಳ ಬಗೆಯೂ ಮಾತುಕತೆ ನಡೆದಿದೆ. ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಎರಡೂ ಕಡೆಯ ನಾಯಕರು ಪ್ರತಿಪಾದಿಸಿದ್ದಾರೆ.