ವಿಶ್ವಸಂಸ್ಥೆಯ ಕಚೇರಿ ಮುಂದೆ ಗನ್ ಹಿಡಿದು ನಿಂತ ವ್ಯಕ್ತಿ

ನ್ಯೂಯಾರ್ಕ್:ಡಿ.೩-ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮುಂದೆ ವ್ಯಕ್ತಿಯೊಬ್ಬ ಗನ್ ಹಿಡಿದುಕೊಂಡು ನಿಂತಿದ್ದು, ಕೆಲಕಾಲ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಿನ್ನೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸ್ವಲ್ಪ ಹೊತ್ತು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ೬೦ ವರ್ಷದ ವ್ಯಕ್ತಿಯೊಬ್ಬ ಗನ್ ಹಿಡಿದುಕೊಂಡು ಕಚೇರಿ ಮುಂಭಾಗ ನಿಂತುಕೊಂಡಿದ್ದು, ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಬೆನ್ನಲ್ಲೇ ಹಲವಾರು ಗಂಟೆಗಳ ಕಾಲ ಯುಎನ್ ಕಚೇರಿಯನ್ನು ಬಂದ್ ಮಾಡಲಾಗಿತ್ತು. ತಕ್ಷಣವೇ ತುರ್ತು ಸೇವೆಗಳ ಘಟಕ, ಬಾಂಬ್ ಸ್ಕ್ವಾಡ್ ಕಾರ್ಯಪ್ರವೃತ್ತವಾಯಿತು. ಆದರೆ ಯಾವುದೇ ಅವಘಡ ಸಂಭವಿಸಲಿಲ್ಲ. ಆ ವ್ಯಕ್ತಿ ಒಬ್ಬನೇ ಮಾತನಾಡಿಕೊಳ್ಳುತ್ತಾ ಇದ್ದು, ತನಗೆ ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಸಂಬಂಧ ತನಿಖೆ ಚುರುಕುಗೊಳಿಸಿದ್ದಾರೆ. ಆ ವ್ಯಕ್ತಿ ತಿರುಗಾಡುತ್ತಿದ್ದ, ಯುಎನ್ ಪ್ರಧಾನ ಕಚೇರಿಯ ಹೊರಗಿನ ರಸ್ತೆಯನ್ನು ಪೊಲೀಸರು ಸುತ್ತುವರಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.