ವಿಶ್ವಸಂಸ್ಥೆಯ ಆರ್ಥಿಕ ಮಂಡಳಿಯಲ್ಲಿ ಭಾರತ ಆಯ್ಕೆ; ಚೀನಾಗೆ ಮುಖಭಂಗ

ವಾಷಿಂಗ್‌ಟನ್, ಸೆ. ೧೫- ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ ಭಾರತ ಚೀನಾವನ್ನು ಹಿಂದಿಕ್ಕಿ ಆಯ್ಕೆಯಾಗಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಾದ ಮಹಿಳೆಯರ ಸ್ಥಿತಿಗತಿ ಆಯೋಗದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.
ಈ ಆಯೋಗದ ಸದಸ್ಯತ್ವಕ್ಕೆ ಭಾರತ, ಆಫ್ಘಾನಿಸ್ತಾನ ಮತ್ತು ಚೀನಾ ರಾಷ್ಟ್ರಗಳು ಸ್ಪರ್ಧಿಸಿದ್ದವು. ೫೪ ರಾಷ್ಟ್ರಗಳು ಈ ಆಯೋಗದ ಸದಸ್ಯತ್ವಕ್ಕೆ ಮತ ಚಲಾಯಿಸಿದ್ದು, ಈ ಪೈಕಿ ಆಫ್ಘಾನಿಸ್ತಾನ ೩೯, ಭಾರತ ೩೮, ಚೀನಾ ೨೭ ಮತಗಳು ಲಭ್ಯವಾಗಿದ್ದು, ಚೀನಾವನ್ನು ಹಿಂದಿಕ್ಕಿ ಭಾರತ ಈ ಆಯೋಗದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.ಭಾರತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಪ್ರತಿಷ್ಠತ ಸ್ಥಾನವನ್ನು ಗೆಲ್ಲಲು ಕಾರಣರಾದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಭಾರತದ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಅವರು ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ತಿರುಮೂರ್ತಿ ಅವರು, ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಪ್ರತಿಷ್ಠಿತ ಸ್ಥಾನವನ್ನು ಭಾರತ ಗೆದ್ದಿದೆ. ಮಹಿಳೆಯರ ಸ್ಥಿತಿಗತಿ ಆಯೋಗದ ಸದಸ್ಯ ರಾಷ್ಟ್ರವಾಗಿ ಭಾರತವೂ ಆಯ್ಕೆಯಾಗಿದೆ ಇದು ನಮ್ಮ ಪ್ರತಿ ಪ್ರಯತ್ನಗಳು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ಬದ್ಧತೆಗೆ ಅನುಮೋದನೆಯಾಗಿದೆ ಎಂದು ಟ್ವೀಟರ್‌ನಲ್ಲಿ ಹೇಳಿ, ಭಾರತದ ಪರವಾಗಿ ಮತ ಚಲಾಯಿಸಿದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತವು ಮುಂದಿನ ನಾಲ್ಕು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಆಯೋಗದ ಸದಸ್ಯ ರಾಷ್ಟ್ರವಾಗಿ ಮುಂದುವರೆಯಲಿದೆ.