ವಿಶ್ವಶಾಂತಿ ಮತ್ತು ಅಭಿವೃದ್ಧಿಗಾಗಿ ವಿಜ್ಞಾನ ಅಗತ್ಯ:ಡಾ. ಸಂಗಮೇಶ ಹಿರೇಮಠ

ಬೀದರ:ನ.14:ವಿಶ್ವದಲ್ಲಿ ಶಾಂತಿ ಮತ್ತು ಅಭಿವೃದ್ಧಿ ತರಲು ಹಾಗೂ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ವಿಜ್ಞಾನದ ಅವಶ್ಯಕತೆ ಬಹಳಷ್ಟಿದೆ ಹಾಗೂ ಈ ಕ್ಷೇತ್ರಕ್ಕೆ ಭಾರತದ ವಿಜ್ಞಾನಿಗಳ ಅಪಾರ ಕೊಡುಗೆಯಿಂದಾಗಿ ಭಾರತ ಪ್ರಪಂಚದ ಅತ್ಯಂತ ಸದೃಢ, ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಕಲಬುರಗಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಸಂಗಮೇಶ ಹಿರೇಮಠ ನುಡಿದರು.

ನಗರದ ಸಮತಾ ಪ್ರೌಢ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಕರ್ನಾಟಕ ಬೀದರ, ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ ಬೆಂಗಳೂರು, ಡಾ. ಕೇರ್ ಚಾರಿಟೇಬಲ್ ಟ್ರಸ್ಟ್, ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ನ್ಯೂ ಮದರ್ ತೆರೆಸಾ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸರ್. ಸಿ.ವಿ. ರಾಮನ್ ಅವರ ಜನ್ಮ ದಿನೋತ್ಸವ ಹಾಗೂ ವಿಶ್ವ ವಿಜ್ಞಾನ ದಿನಾಚರಣೆ ಪ್ರಯುಕ್ತ ಮಕ್ಕಳಿಗಾಗಿ ಆಯೋಜಿಸಿರುವ ವಿವಿಧ ಸ್ಪರ್ಧೆಗಳು ಹಾಗೂ ವಿಜ್ಞಾನ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ, ಡಿ.ಡಿ.ಪಿ.ಐ. ಕಚೇರಿಯ ಎ.ಪಿ.ಸಿ.ಯಾದ ಶ್ರೀ ಹುಡಗೆ ಗುಂಡಪ್ಪನವರು ಮಾತನಾಡುತ್ತಾ, ಇಂದು ಮಕ್ಕಳು ಭಾರತದ ಶ್ರೇಷ್ಠ ವಿಜ್ಞಾನಿಯಾದ ಸರ್ ಸಿ.ವಿ. ರಾಮನ್ ರವರ ಜೀವನ ಸಾಧನೆ ಬಗ್ಗೆ ತಿಳಿಸಿ, ಮೇಘಾನಂದ ಸಾಹಾ, ಶ್ರೀನಿವಾಸ ರಾಮಾನುಜಮ್, ಜಗದೀಶ ಚಂದ್ರಬೋಸ್, ವಿಕ್ರಮ್ ಸಾರಾಭಾಯಿ ರವರ ಸೇವೆಯನ್ನು ಸ್ಮರಿಸುತ್ತಾ, ಇವರಂತೆ ಶ್ರೇಷ್ಠ ವಿಜ್ಞಾನಿಗಳಾಗುವಂತೆ ತಿಳಿಸಿ, ಅವರ ಚಿಂತನೆಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಜೊತೆಗೆ ಇಂದು ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು, ಸಂಶೋಧನೆ ಮಾಡುವಂತೆ ಹಾಗೂ ವೈಜ್ಞಾನಿಕ ಚಿಂತಕರಾಗುವಂತೆ ಮಕ್ಕಳಿಗೆ ಸಲಹೆ ನೀಡಿದರು.

ಡಾ. ಕೇರ್ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಸಿ. ಆನಂದರಾವ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಶಕ್ತಿ ಶಿಕ್ಷಕರಲ್ಲಿದೆ, ಆದ್ದರಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಜಗತ್ತಿಗೆ ಕೀರ್ತಿ ತಂದ ನಮ್ಮ ಭಾರತೀಯ ವಿಜ್ಞಾನಿಗಳ ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಮೂಡಿಸಲು ಶಿಕ್ಷಕರು ಪ್ರಾಮಾಣೀಕವಾಗಿ ಪ್ರಯತ್ನ ಮಾಡಬೇಕೆಂದು ಹೇಳಿದರು.

ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಾಶಿನಾಥ ಪಾಟೀಲ ಮುಖ್ಯ ಅತಿಥಿಯಾಗಿ ಮಾತನಾಡಿ, ವಿಶ್ವ ವಿಜ್ಞಾನ ದಿನಾಚರಣೆಯ ಉದ್ದೇಶ, ವಿಶ್ವಶಾಂತಿ ಮತ್ತು ಅಭಿವೃದ್ಧಿಗಾಗಿ. ಮಕ್ಕಳಲ್ಲಿ ಮತ್ತು ಜನರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನಿಗಳ ಕೊಡುಗೆಗಳನ್ನು ಸ್ಮರಿಸಿ, ಜಾಗೃತಿ ಮೂಡಿಸುವುದು ಪ್ರಮುಖ ಧ್ಯೇಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಎಸ್.ಪಿ.ಕೆ. ಸಮಿತಿ ಔರಾದನ ಅಧ್ಯಕ್ಷರಾದ ಶ್ರೀ ಕೆ. ಪುಂಡಲಿಕರಾವ ಮಾತನಾಡಿ, ಜಗತ್ತಿನಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಸರ್ ಸಿ.ವಿ. ರಾಮನ್‍ರು ತಮ್ಮ ಜೀವನವನ್ನು ವಿಜ್ಞಾನಕ್ಕಾಗಿ ಮುಡುಪಾಗಿಟ್ಟು, ಶ್ರೇಷ್ಠ ಸಾಧನೆ ಮಾಡಿದವರು ಅವರ ಆದರ್ಶಗಳನ್ನು ಮಕ್ಕಳು ತಮ್ಮ ಜೀವನದ ಗುರಿಯಾಗಿಸಿಕೊಳ್ಳಬೇಕು ಎಂದು ನುಡಿದರು.

ಜಿಲ್ಲಾ ವಿಜ್ಞಾನ ಸಮಿತಿಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ಸಂಜೀವಕುಮಾರ ಸ್ವಾಮಿ, ಪ್ರಾಸ್ತಾವಿಕವಾಗಿ ಮಾತನಾಡಿ, ವೈಜ್ಞಾನಿಕ ಮನೋಭಾವ, ಮೂಢನಂಬಿಕೆ ನಿವಾರಣೆ ಮತ್ತು ಶ್ರೇಷ್ಠ ವಿಜ್ಞಾನಿಗಳ ಜೀವನದ ಆದರ್ಶಗಳನ್ನು ಹಾಗೂ ಮೌಲ್ಯಗಳನ್ನು ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರಬಂಧ, ನಿಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ಸರಕಾರಿ ಪ್ರೌಢ ಶಾಲೆ ಕೌಡಗಾಂವ, ಕಾಡವಾದ, ಅಂಬೇಡ್ಕರ ತತ್ವ ಪ್ರೌಢ ಶಾಲೆ ಬೀದರ, ಅರುಣೋದಯ ಪ್ರೌಢ ಶಾಲೆ, ಜೀಜಾಮಾತಾ ಪ್ರೌಢ ಶಾಲೆ, ಸಮತಾ ಪ್ರೌಢ ಶಾಲೆ, ಮನ್ನಾಎಖೇಳ್ಳಿ ಪ್ರೌಢ ಶಾಲೆಯ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ, ಶ್ರೀ ಮಹಾರುದ್ರಪ್ಪಾ ಆಣದೂರೆ, ಶ್ರೀ ಬಾಬುರಾವ ದಾನಿ, ಶ್ರೀ ರಮೇಶ ಕುಲಕರ್ಣಿ, ಶ್ರೀ ಸಂಗ್ರಾಮಪ್ಪ ಎಂಗಳೆ, ಡಾ. ಮಲ್ಲಿಕಾರ್ಜುನ ಚಲವಾ, ಡಾ. ಹಾವಗಿರಾವ ಮೈಲಾರೆ, ಡಾ. ರಾಜೇಂದ್ರ ಬಿರಾದಾರ, ಸುರೇಂದ್ರ ಹುಡಗಿಕರ್, ಶ್ರೀ ಸೂರ್ಯಕಾಂತ, ಶ್ರೀ ಶಿವಕುಮಾರ, ಶ್ರೀ ರಮೇಶ ಬಿರಾದಾರ ರವರಿಗೆ ಸಿ.ವಿ. ರಾಮನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರಂಗ ಬೆಲ್ದಾರ್, ಕ.ರಾ.ವಿ.ಪ. ಬೆಂಗಳೂರಿನ ಕಾರ್ಯಕಾರಣಿ ಮಂಡಳಿ ಸದಸ್ಯರಾದ ಶ್ರೀ ಬಾಬುರಾವ ದಾನಿ ಮಾತನಾಡಿದರು.

ಶ್ರೀ ಲೋಕೇಶ ಉಡಬಾಳೆ, ಶ್ರೀ ಮಂಜುನಾಥ ಬೆಳಕೇರೆ, ಶ್ರೀ ಅರವಿಂದ ಕುಲಕರ್ಣಿ, ಶ್ರೀ ಕಲಾಲ ದೇವಿಪ್ರಸಾದ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಸಂತೋಷ ಮಂಗಳೂರೆ ನೆರವೇರಿಸಿದರೆ, ಸ್ವಾಗತವನ್ನು ಶ್ರೀ ಬಳಿರಾಮ ಕುರನಾಳೆ ಮಾಡಿದರು, ಶ್ರೀ ಹಿರೇಮಣಿ ಚವ್ಹಾಣ ವಂದಿಸಿದರು.