ವಿಶ್ವಶಾಂತಿಗಾಗಿ ಮಹಾಶಿವಯೋಗ ಸಾಧನೆ

ವಿಜಯಪುರ :ಮಾ.29: ವಿಜಯಪುರ ತಾಲೂಕಿನ ಬುರಣಾಪೂರದ ಶ್ರೀ ಮಲ್ಲಿಕಾರ್ಜುನ ದೇವಾಲಯದ ದರ್ಮದರ್ಶಿಗಳಾದ ಪ.ಪೂ. ಶ್ರೀ ಲಕ್ಷ್ಮಣ ಶಿವಶರಣರು ಬಾಲ್ಯದಲ್ಲಿ ಭಕ್ತಿಯೋಗವನ್ನು ಪ್ರಾರಂಭಿಸಿ ಸದ್ಗುರುಗಳಿಂದ ಲಿಂಗದೀಕ್ಷೆಯನ್ನು ಪಡೆದು ಕಾಯಕಯೋಗಿಯಾಗಿ ಪ್ರಪಂಚ ಪಾರಮಾರ್ಥ ಎರಡನ್ನು ಸಮನಾಗಿ ಸ್ವೀಕರಿಸಿ ಬಸವಾದಿ ಶಿವಶರಣರ ಸಂದೇಶದಂತೆ ತಮ್ಮ ಜೀವನವನ್ನು ರೂಪಿಸಿಕೊಂಡು ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿಸಿಕೊಂಡು ಶ್ರೀ ಮಲ್ಲಿಕಾರ್ಜುನ ದೇವಾಲಯದ ಧರ್ಮದರ್ಶಿಗಳಾಗಿ ಯಾವ ಫಲಾಪೇಕ್ಷೆಯಿಲ್ಲದೆ ಮಹಾದೇವ ಮಲ್ಲಿಕಾರ್ಜುನನ ಹಾಗೂ ಸದ್ಗುರು ದೇವ ಶ್ರೀ ಸಿದ್ಧಾರೂಢರ ಪೂಜೆ ಧ್ಯಾನ ಹಾಗೂ ಧಾರ್ಮಿಕ ಸೇವಾಧಿಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದು ಶರಣ ಮಾರ್ಗದಲ್ಲಿ 40 ವರ್ಷಗಳ ಕಾಲ ಅತ್ಯುತ್ತಮವಾದ ಶಿವಯೋಗ ಸಾಧನೆಯನ್ನು ಮಾಡಿ ಮಾನವ ಜನ್ಮದ ಸಾರ್ಥಕತೆ ಹಾಗೂ ಲೋಕಕಲ್ಯಾಣಕ್ಕಾಗಿ 108 ಕೋಟಿ ಶಿವ ಪಂಚಾಕ್ಷರಿ ಮಹಾಮಂತ್ರ ಜಪಯಜ್ಞವನ್ನು ಪೂರ್ಣಗೊಳಿಸಿದ್ದಾರೆ.
ಧರ್ಮಜಾಗೃತಿಯ ಕಾರ್ಯವನ್ನು ಕೈಗೊಂಡು 1ಲಕ್ಷ 96 ಸಾವಿರ ಇಷ್ಟಲಿಂಗಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಿ ಸರ್ವರಿಗೂ ವಿಭೂತಿ ಧಾರಣೆ ಲಿಂಗಪೂಜೆ ರುದ್ರಾಕ್ಷಿಧಾರಣೆ, ಗುರುಸೇವೆಯ ಮಹತ್ವ ಹಾಗೂ ಶಿವಶರಣರ ಸಂದೇಶಗಳನ್ನು ತಮ್ಮ ಅಮೃತವಾಣಿಯ ಆಧ್ಯಾತ್ಮಿಕ ಪ್ರವಚನದ ಮೂಲಕ ತಿಳಿಸುತ್ತಾ, ತಮ್ಮ ಅಮೂಲ್ಯವಾದ ಜೀವನವನ್ನು ಶಿವಧ್ಯಾನ ಚಿಂತನೆಗಾಗಿ ಮುಡುಪಾಗಿಟ್ಟು, ಕನ್ನಡ ನಾಡಿನ ಎಲ್ಲ ಶಿವಭಕ್ತರ ಪ್ರೀತಿಗೆ ಪಾತ್ರರಾದ ಪೂಜ್ಯ ಶ್ರೀ ಲಕ್ಷ್ಮಣ ಶಿವಶರಣರು ಲೋಕೋದ್ಧಾರಕ್ಕಾಗಿ ನಡೆಸಿಕೊಂಡು ಬಂದಿರುವ ಮಹಾಶಿವಯೋಗವನ್ನು ಬುರಣಾಪುರದ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಪ.ಪೂ. ಯೋಗೇಶ್ವರಿ ಮಾತಾಜಿಯವರ ಪಾವನ ಸಾನಿಧ್ಯದಲ್ಲಿ ಹಾಗೂ ಶಿವಭಕ್ತರ ಉಪಸ್ಥಿತಿಯಲ್ಲಿ ಮುಕ್ತಾಯಗೊಳಿಸಿದರು ಎಂದು ಹಣಮಂತ ಪುಟ್ಟಿ ಪ್ರಕಟಣೆಗೆ ತಿಳಿಸಿದ್ದಾರೆ.