ವಿಶ್ವವಿದ್ಯಾಲಯ ಮಟ್ಟದಲ್ಲಿ ಡಾ. ಶರಣಬಸವಪ್ಪ ಅಪ್ಪಾ ಅವರ ಕೊಡುಗೆ ಅಪಾರ: ರೇವೂರ್

ಕಲಬುರಗಿ:ನ.14: ಶರಣಬಸವಪ್ಪ ಅಪ್ಪಾಜೀ ಅವರು ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಒಬ್ಬರೇ ಮಾಡಿರುವುದು ನಿಜಕ್ಕೂ ಅದ್ಭುತ. ತಮ್ಮ ಸಂಸ್ಥೆಯಡಿಯಲ್ಲಿ ಸ್ವಂತವಿಶ್ವವಿದ್ಯಾಲಯವೇ ಸ್ಥಾಪಿಸಿ ಈ ಭಾಗದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮೇಲೆ ಉತ್ತಮ ಬೆಳಕು ನೀಡುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಹೇಳಿದರು.
ಶ್ರೀ ಶರಣಬಸವೇಶ್ವರ್ ಮಹಾ ಸಂಸ್ಥಾನದ ಡಾ. ಶರಣಬಸವಪ್ಪ ಅಪ್ಪಾ ಅವರ 86ನೇ ಜನ್ಮದಿನ ಅಂಗವಾಗಿ ಇಲ್ಲಿನ ವಿಶ್ವಜೋತಿ ಪ್ರತಿಷ್ಠಾನದ ವತಿಯಿಂದ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ನಿರತರಾದ ಗೃಹ ರಕ್ಷಕ ದಳದ 86 ಜನರಿಗೆ ಕೊರೋನಾದಿಂದ ರಕ್ಷಿಸಿಕೊಳ್ಳಲು ಫೇಸ್ ಶೀಲ್ಡ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಒತ್ತ ನೀಡಿ, ಇಂದಿನ ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತನೆ ಮಾಡುವಂತೆ ಪ್ರೇರಣೆ ನೀಡುತ್ತಿರುವುದು ಇಂದಿನ ಸಮಾಜಕ್ಕೆ ಮಾದರಿ ಎಂದರು.
ಸಂಘಟಕ ವಿಜಯಕುವiರ್ ತೇಗಲತಿಪ್ಪಿ ಅವರು ಮಾತನಾಡಿ, ಶ್ರೀ ಶರಣಬಸವೇಶ್ವರ್ ಸಂಸ್ಥಾನವು ಸೇವಾ ಮನೋಭಾವದಿಂದ ಈ ಭಾಗದ ಜನರಿಗೆ ಆರಾಧ್ಯ ಧಾರ್ಮಿಕ ಕೇಂದ್ರವಾಗಿದೆ. ಅನ್ನ ದಾಸೋಹದ ಜತೆಗೆ ಅಕ್ಷರ ದಾಸೋಹವನ್ನು ನೀಡುತ್ತಿರುವ ಸಂಸ್ಥೆಯ ಯಶಸ್ವಿಗೆ ಪೂಜ್ಯ ಅಪ್ಪಾಜೀ ಅವರೇ ಕಾರಣರಾಗುತ್ತಾರೆ. ಕಲ್ಯಾನ ನಾಡಿನ ಶೈಕ್ಷಣಿಕ ಶಕ್ತಿ ಹಾಗೂ ಮಹಿಳಾ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ ಶಿಕ್ಷಣ ಸಂಸ್ಥೆ ವಿದ್ಯಾವರ್ಧಕ ಸಂಘವಾಗಿದೆ. ಕಲೆ, ವಿಜ್ಞಾನ, ತಾಂತ್ರಿಕ, ಪತ್ರಿಕೋದ್ಯಮ. ಪ್ರವಾಸೋದ್ಯಮ, ಪ್ರತ್ಯೇಕ ಶರಣಬಸವ ವಿಶ್ವವಿದ್ಯಾಲಯ ಮುಂತಾದ ನೂತನ ಕೋರ್ಸುಗಳನ್ನು ಈ ಭಾಗದ ವಿದ್ಯಾರ್ಥಿಗಳು ಕಲಿಯಲುಅವಕಾಶ ಕಲ್ಪಿಸುತ್ತಿರುವ ಜ್ಞಾನ ಕೇಂದ್ರ ಇದಾಗಿದೆ. ಹಾಗಾಗಿ, ಡಾ.ಶರಣಬಸವಪ್ಪ ಅಪ್ಪಾಜೀ ಅವರ ಜನ್ಮದಿನಾಚರಣೆ ಸಾರ್ವತ್ರಿಕವಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಪ್ರತಿಷ್ಠಾನದ ವತಿಯಿಂದ ಕಳೆದ ಹತ್ತಾರು ವರ್ಷಗಳಿಂದ ಈ ರೀತಿಯಾಗಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ರಾಜ್ಯ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ದಯಾಘನ್ ಧಾರವಾಡಕರ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ನೆಲೋಗಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ್ ಆರ್. ಸಜ್ಜನ್ ಮುಂತಾದವರು ಉಪಸ್ಥಿತರಿದ್ದರು.