ವಿಶ್ವವಿದ್ಯಾಲಯ ಜ್ಞಾನ ಹಂಚುವ ಕೇಂದ್ರವಾಗಬೇಕು: ಪ್ರೊ.ಹರೀಶ್ ರಾಮಸ್ವಾಮಿ

ರಾಯಚೂರು.ಆ.೬- ವಿಶ್ವವಿದ್ಯಾಲಯಗಳು ಕೇವಲ ಜ್ಞಾನವನ್ನು ಸಂಗ್ರಹಿಸುವ ಕೇಂದ್ರಗಳಾಗದೆ, ಜ್ಞಾನ ಪ್ರಸರಿಸುವ ಕೇಂದ್ರಗಳಾಗಬೇಕು ಭಾರತದ ಸ್ವತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ನಮ್ಮ ಪ್ರಮುಖ ಆದ್ಯತೆಗಳಾಗಬೇಕು ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ ಗುರುವಾರ ಆಯೋಜಿಸಿದ್ದ ತಾಲೂಕಿನ ಹೊಸ ಗೋನವಾರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಗ್ರಾಮೀಣ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗ್ರಾಮೀಣ ಭಾರತ ಬದಲಾದರೆ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಗಾಂಧೀಜಿ ಹಾಗೂ ಎಸ್ಕೆ ಡೇ ಅವರ ಗ್ರಾಮೀಣ ಅಭಿವೃದ್ಧಿಯ ವಿಚಾರಗಳು ನಿಮಗೆ ಮಾದರಿಯಾಗಲಿ ಎಂದು ಅವರು ಹೇಳಿದರು.
ಸಮಾಜಕಾರ್ಯ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಶರಣಬಸವರಾಜ ಅವರು ಶಿಬಿರದಲ್ಲಿ ೭ ದಿನಗಳಲ್ಲಿ ಕೈಗೊಂಡ ಕಾರ್ಯಕ್ರಮಗಳ ಸಮಗ್ರ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಡಾ.ರಶ್ಮೀರಾಣಿ ಅಗ್ನಿಹೋತ್ರಿ ನಿರೂಪಿಸಿದರು, ಬಜಾರಪ್ಪ ವಂದಿಸಿದರು.