ವಿಶ್ವವಿದ್ಯಾಲಯವನ್ನು ಉದ್ಘಾಟನೆ ಮಾಡುತ್ತಿರುವದು ನಾಚಿಕೆಗೇಡು

ರಾಯಚೂರು,ಮಾ.೨೮-
ರಾಯಚೂರು ವಿಶ್ವವಿದ್ಯಾಲಯವನ್ನು ರಾಜ್ಯದ ಮುಖ್ಯಮಂತ್ರಿ ಇಂದು ಉದ್ಘಾಟನೆ ಮಾಡುತ್ತಿರುವದು ನಾಚಿಕೆಗೇಡಿನ ಸಂಗತಿ. ವಿಶ್ವವಿದ್ಯಾಲಯ ಪ್ರಾರಂಭವಾಗಿ ಎರಡು ವರ್ಷವಾದರೂ ನಯಾ ಪೈಸೆ ಅನುದಾನ ನೀಡದ ಸರಕಾರ ಯಾವ ಮುಖವನ್ನಿಟ್ಟುಕೊಂಡು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವಂತಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸುಮಾರು ೫೦೦ ಕೋ.ರೂ ಅನುದಾನದ ಬೇಡಿಕೆ ಇದ್ದರೂ ಇಲ್ಲಿಯವರೆಗೆ ಒಂದು ಒಂದು ನಯಾ ಪೈಸೆ ಅಭಿವೃದ್ಧಿ ಅನುದಾನ ಬಿಡುಗಡೆಗೊಳಿಸಿಲ್ಲ, ಇಂತಹ ಸಂದರ್ಭದಲ್ಲಿ ಚುನಾವಣೆ ದೃಷ್ಟಿಯಿಂದ ಉದ್ಘಾಟನೆ ಮಾಡುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದರು.
ಸುಮಾರು ೨೫೦ ಎಕರೆ ಜಮೀನು ಇರುವ ರಾಯಚೂರು ವಿಶ್ವವಿದ್ಯಾಲಯದ ೨೩ ಸ್ನಾತಕೋತ್ತರ ಕೋರ್ಸಗಳಿದ್ದು ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗಡೆಯೇ ಉನ್ನತ ವ್ಯಾಸಂಗ್ ಪಡೆಯುತ್ತಿದ್ದಾರೆ, ಆ ವಿದ್ಯಾರ್ಥಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲ, ಅವುಗಳನ್ನು ಒದಗಿಸುವದು ಬಿಟ್ಟು ಕಾಟಾಚಾರದ ಉದ್ಘಾಟನೆ ಯಾವ ಪುರುಷಾರ್ಥಕ್ಕೆ ಎಂದು ತಿಳಿಯದಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಗೆ ಈ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿ ಕುರಿತು ಕಾಳಜಿ ಇದ್ದಲ್ಲಿ ತಕ್ಷಣ ವಿಶ್ವವಿದ್ಯಾಲಯದ ಬೇಡಿಕೆಯಂತೆ ಅನುದಾನ ಬಿಡುಗಡೆ ಹಾಗೂ ಹುದ್ದೆಗಳ ಮಂಜೂರಾತಿ ಮಾಡಬೇಕೆಂದು ಡಾ.ರಝಾಕ ಉಸ್ತಾದ ಆಗ್ರಹಿಸಿದರು.