ವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳು: ಬೊಮ್ಮಾಯಿ

ಬೀದರ, ಮಾ. 29: ಇಂದು ಆರಂಭಿಸಿರುವ ಎಲ್ಲ ವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ನಿನ್ನೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಒಂಭತ್ತು ನೂತನ ವಿಶ್ವವಿದ್ಯಾಲಯಗಳನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ. ಶಿಕ್ಷಣ ಬೆಳವಣಿಗೆ ಆಗಬೇಕು. ಈ ರೀತಿಯ ವಿಶ್ವವಿದ್ಯಾಲಯಗಳು ದೇಶದಲ್ಲಿಯೇ ಪ್ರಥಮವಾಗಿ ಪ್ರಾರಂಭವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲರೂ ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದರು.

ದೇಶದಲ್ಲಿ ಉನ್ನತ ಶಿಕ್ಷಣ ಅಂದರೆ ಐಐಟಿ ಅದಕ್ಕೆ ಸಿಇಟಿ ಮೂಲಕ ಆಯ್ಕೆ ಆಗಬೇಕು. ನಮ್ಮ ಮಕ್ಕಳೂ ಐಐಟಿ ಮಾದರಿಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಕೆಐಟಿ ಸ್ಥಾಪನೆ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಸಂಸ್ಥೆಗಳು ಐಐಟಿ ಮಾದರಿಯಲ್ಲಿ ಇರಲಿವೆ. ಐಐಟಿ ಹುಡುಕಿಕೊಂಡು ಹೋಗುವ ಬದಲು ಇಲ್ಲಿಯೇ ಐಐಟಿ ಸೃಷ್ಟಿಸುತ್ತಿದ್ದೇವೆ. ಜಗತ್ತಿನ ಉನ್ನತ ವಿವಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ನಾಡಿನ ಭವಿಷ್ಯ: ಈಗ 21 ನೇ ಶತಮಾನ ಜ್ಞಾನದ ಶತಮಾನ, ಮುಂದಿನ ದಿನಗಳಲ್ಲಿ ಭಾರತ ವಿಶ್ವ ಗುರುವಾಗಲಿದೆ. ಚೀನಾನ ಕೂಡ ಭಾರತ ಕೊರೊನಾ ನಿಯಂತ್ರಣ ಮಾಡಿದ್ದನ್ನು ಮೆಚ್ಚಿಕೊಂಡಿದೆ ಎಂದರು. ಶಿಕ್ಷಣ ಸಂಸ್ಥೆ ಅಂದರೆ ಪಾವಿತ್ಯತೆ. ಸಂಸ್ಥೆಗಳು ಸರಸ್ವತಿಯ ವಾಹನ ಪರಮಹಂಸ ಕೂಡ ಪವಿತ್ರವಾಗಿದ್ದು ವಿದ್ಯಾರ್ಥಿಗಳು ಅಷ್ಟೇ ಎತ್ತರಕ್ಕೆ ಬೆಳೆಯಬೇಕು ಎಂದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ ನಾರಾಯಣ್, ಸಚಿವ ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಉಪಸ್ಥಿತರಿದ್ದರು.

ವರ್ಚುವಲ್ ವೇದಿಕೆ ಕಾರ್ಯಕ್ರಮದ ನಂತರ ಬೀದರ ವಿಶ್ವವಿದ್ಯಾಲಯ ಹಾಲಹಳ್ಳಿ (ಕೆ) ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ದಯಾನಂದ ಅಗಸರ್ ಭಾಗವಹಿಸಿ ಮಾತನಾಡಿ, ಬೀದರ ಜಿಲ್ಲೆಗೆ ನೂತನ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ವಿಶ್ವವಿದ್ಯಾಲಯಕ್ಕೆ ಮಾತೃ ವಿಶ್ವವಿದ್ಯಾಲಯದಂತಿರುವ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಿಂದ ಎಲ್ಲ ಸಲಹೆ ಮತ್ತು ಸಹಕಾರ ನೀಡಲಾಗುವುದು, ಹೊಸ ವಿಶ್ವವಿದ್ಯಾಲಯದಿಂದ ಸಾಕಷ್ಟು ಸವಾಲು ಮತ್ತು ಅವಕಾಶಗಳು ಸಿಗುತ್ತವೆ ಮತ್ತು ಈ ವಿಶ್ವವಿದ್ಯಾಲಯದಲ್ಲಿ 13 ವಿವಿಧ ಸ್ನಾತಕೋತ್ತರ ವಿಭಾಗಗಳು ಇದ್ದು, 2022-23ನೇ ಸಾಲಿನ ಶೈಕ್ಷಣಿಕ ಕಾರ್ಯ ಪ್ರಾರಂಭಗೊಂಡಿದೆ ಮತ್ತು 320 ಎಕರೆ ಜಮೀನು ಕೂಡ ಈ ವಿಶ್ವವಿದ್ಯಾಲಯಕ್ಕೆ ಇರುವುದರಿಂದ ಭೌಗೋಳಿಕವಾಗಿಯು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕ ವಾತಾವರಣವನ್ನು ಇಲ್ಲಿ ಇದ್ದು, ಉನ್ನತ ಶಿಕ್ಷಣ ಕಲಿಯಲು ಈ ಭಾಗದವರಿಗೆ ಬಹಳಷ್ಟು ಅವಕಾಶಗಳಿದ್ದು ಇದಕ್ಕೆ ಎಲ್ಲರ ಸಹಕಾರವು ಆರಂಭದಲ್ಲಿ ಬೇಕಾಗುತ್ತದೆ ಎಂದು ಹೇಳಿದರು.

ಬೀದರ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲಯ ನಮಗೆ ಹಿರಿಯಣ್ಣ ಇದ್ದಂತೆ, ನಮಗೆ ಅವರ ಸಹಾಯ, ಸಹಕಾರ ಬೇಕಾಗುತ್ತದೆ ಈ ಭಾಗದ ನಿರೀಕ್ಷೆಯಂತೆ ಹೊಸ ವಿಶ್ವವಿದ್ಯಾಲಯವಾಗಿರುವುದು ನಮಗೆ ತುಂಬಾ ಸಂತೋಷವಾಗಿದೆ. ಇಲ್ಲಿ ಒಳ್ಳೆಯ ಕೌಶಲ್ಯಾಭಿವೃದ್ಧಿಯ ಕೋರ್ಸ್‍ಗಳಿಗೆ ಒತ್ತು ನೀಡುವ ಮೂಲಕ ಈ ಹೊಸ ವಿಶ್ವವಿದ್ಯಾಲಯ ತನ್ನದೆಯಾದ ವಿಭಿನ್ನತೆಯನ್ನು ಹೊಂದುವಂತೆ ಮಾಡಲಾಗುವುದು ಮತ್ತು ಇದರ ಅಭಿವೃದ್ಧಿಗೆ ಹಗಲಿರುಳು ಎನ್ನದೆ ನಾನು ಶ್ರಮಿಸುತ್ತೇನೆ. ತಜ್ಞರ ಮಾರ್ಗದರ್ಶನ ಪಡೆದು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕೋರ್ಸುಗಳನ್ನು ಬರುವ ದಿನಮಾನಗಳಲ್ಲಿ ಆರಂಭಿಸಲಾಗುವುದು ಮತ್ತು ನಮಗೆ ಈ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರು ಸಹಕಾರ ನೀಡಿದರೆ ಇದೊಂದು ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರತಿಮಾ ಚಾಮಾ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಬಸವರಾಜ ಪವಾರ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಬಿ.ಶರಣಪ್ಪಾ, ಬ್ಯಾಲಹಳ್ಳಿ (ಕೆ) ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪವಿತ್ರಾ ಶಿವಕುಮಾರ ಸದಾಶಿವ, ಪ್ರೊ.ಶಿವಾನಂದ, ಪ್ರೊ.ರವೀಂದ್ರನಾಥ ಗಬಾಡಿ ಸೇರಿದಂತೆ ವಿವಿಧ ಕಾಲೇಜುಗಳಿಂದ ಆಗಮಿಸಿದ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಬೀದರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.