ವಿಶ್ವನಾಥ್ ರದ್ದು ಅಧಿಕಾರ ವ್ಯಾಮೋಹದ ಹೇಳಿಕೆ: ರಾಜೇಶ್

ಸಂಜೆವಾಣಿ ನ್ಯೂಸ್
ಮೈಸೂರು: ಏ.13:- ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿ ಸ್ವಾಭಿಮಾನ ಕಳೆದುಕೊಂಡ ರಾಜಕಾರಣಿಯಾಗಿದ್ದಾರೆ ಎಂದು ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಸ್. ರಾಜೇಶ್ ಟೀಕಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡದಿದೆ. ಆದರೆ ಸ್ವಾರ್ಥ ಸಾಧನೆಗಾಗಿ ಪದೇ ಪದೇ ಪಕ್ಷಾಂತರ ಮಾಡುತ್ತಿರುವ ವಿಶ್ವನಾಥ್ ಇದನ್ನು ಟೀಕಿಸುತ್ತಿದ್ದಾರೆಂದರು.
ಅಲ್ಲದೆ, ಅಂದು ನಾಲ್ವಡಿ ಅವರು ಕೈಗೊಂಡ ರಾಜ್ಯಾಭಿವೃದ್ಧಿ ಕ್ರಮದ ಹಾದಿಯಲ್ಲೇ ಸಿದ್ದರಾಮಯ್ಯ ಸಾಗಿದ್ದಾರೆ. ಹೀಗಾಗಿ ವಿಶ್ವನಾಥ್ ಅವರು ಮೈಸೂರಿಗೆ ಸಿಎಂ ಕೈಗೊಂಡ ಕ್ರಮದ ಬಗ್ಗೆ ಮಾತನಾಡಲಿ. ಬದಲಾಗಿ ಯಾವುದೇ ಪಕ್ಷದ ತತ್ತ?ವ ಸಿದ್ಧಾಂತ ಅನುಸರಿಸದೇ ಸಿದ್ಧಾಂತಗಳನ್ನು ಗಾಳಿಗೆ ತೂರುತ್ತಿದ್ದಾರೆ. ತಾವು ಬಿಜೆಪಿ ಎಂಎಲ್ಸಿ ಆಗಿದ್ದರೂ ರಾಜ್ಯದ ಕಾವೇರಿ, ಮಹದಾಯಿ, ಮೇಕೆದಾಟು, ಬರ ಸಮಸ್ಯೆಗಳ ಬಗ್ಗೆ ಪ್ರಧಾನಿಯೊಡನೆ ಒಂದು ಬಾರಿಯೂ ಚರ್ಚಿಸಲಿಲ್ಲ. ಹೀಗಿದ್ದರೂ ಈಗ ಕಾಂಗ್ರೆಸ್ ಟೀಕಿಸಿ, ಬಿಜೆಪಿ ಅಭ್ಯರ್ಥಿ ಯದುವೀರ್ ಅವರನ್ನು ಬೆಂಬಲಿಸಬೇಕೆಂದು ಕೋರುತ್ತಿರುವುದು ಸ್ವಾರ್ಥ ರಾಜಕಾರಣವಾಗಿದೆ ಎಂದು ಆರೋಪಿಸಿದರು.
ಇನ್ನಿತರ ಮುಖಂಡರಾದ ರವಿ, ಪ್ರಮೋದ್, ಸಿದ್ದರಾಜು, ಎಸ್. ರಹೀಂ, ಖಮ್ರಾನ್ ಪಾಷ ಇದ್ದರು.