ವಿಶ್ವದ ಮೊದಲ ಸಂಶ್ಲೇಷಿತ ಭ್ರೂಣ ಸೃಷ್ಟಿ

ಅಮೇರಿಕ,ಜೂ.೧೫-ಸೃಷ್ಟಿ ನಿಯಮದ ಪ್ರಕಾರ ಗಂಡು-ಹೆಣ್ಣಿನ ಮಿಲನದಿಂದ ಮಗು ಹುಟ್ಟುತ್ತದೆ. ಮಹಿಳೆಯ ಗರ್ಭದಲ್ಲಿ ಭ್ರೂಣ ರೂಪಿಸಲು ಪುರುಷನ ವೀರ್ಯಾಣು ಅಗತ್ಯ. ಆದರೆ ಇತ್ತೀಚೆಗೆ ಸಂಶೋಧಕರ ತಂಡವೊಂದು ವಿಸ್ಮಯ ಎನ್ನಬಹುದಾದ ಮಾಹಿತಿಯನ್ನು ಹೊರಹಾಕಿದೆ. ಈ ಮಾಹಿತಿ ಪ್ರಕಾರ ಸಂತಾನೋತ್ಪತ್ತಿಗೆ ಪುರುಷ ವೀರ್ಯ ಬೇಕಾಗಿಲ್ಲ.
ವಿಜ್ಞಾನಿಗಳು ಜಗತ್ತಿನ ಮೊದಲ ಮಾನವ ಸಂಶ್ಲೇಷಿತ ಮಾದರಿ ಭ್ರೂಣಗಳ ರಚನೆಯನ್ನು ವರದಿ ಮಾಡಿದ್ದಾರೆ. ಅಂಡಾಣು ಅಥವಾ ವೀರ್ಯಾಣುಗಳ ಅಗತ್ಯವಿಲ್ಲದೆ ಈ ಭ್ರೂಣ ಸಿದ್ಧಗೊಂಡಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಸಂಶೋಧಕರ ತಂಡವು ಅಂಡಾಣು ಮತ್ತು ವೀರ್ಯದ ಸಹಾಯವಿಲ್ಲದೆ, ಕಾಂಡಕೋಶಗಳನ್ನು ಬಳಸಿಕೊಂಡು ಕೃತಕ ಮಾನವ ಭ್ರೂಣಗಳನ್ನು ತಯಾರಿಸಿದ್ದಾರೆ. ಇದು ವಿಶ್ವದ ಮೊದಲ ಸಂಶ್ಲೇಷಿತ ಮಾನವ ಭ್ರೂಣದಂತಹ ರಚನೆಯಾಗಿದೆ. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಕಾಂಡಕೋಶಗಳನ್ನು ಬಳಸಿಕೊಂಡು ಕೃತಕ ಮಾನವ ಭ್ರೂಣಗಳನ್ನು ತಯಾರಿಸಿದ್ದಾರೆ. ಈ ಭ್ರೂಣದಂತಹ ರಚನೆಗಳು ಮಾನವನ ಬೆಳವಣಿಗೆಯ ಅತ್ಯಂತ ಆರಂಭಿಕ ಹಂತಗಳಲ್ಲಿವೆ. ಈ ರಚನೆಗೆ ಹೃದಯ ಅಥವಾ ಮಿದುಳು ಇಲ್ಲ ಎಂದು ಹೇಳಲಾಗಿದೆ.
ಕಾನೂನು ಚೌಕಟ್ಟನ್ನು ಹೊಂದಿರುವ ಇನ್ ವಿಟ್ರೊ ಫರ್ಟಿಲೈಸೇಶನ್ ನಿಂದ ಉಂಟಾಗುವ ಮಾನವ ಭ್ರೂಣಗಳಂತಲ್ಲದೆ, ಮಾನವ ಭ್ರೂಣಗಳ ಕಾಂಡಕೋಶದಿಂದ ಪಡೆದ ಮಾದರಿಗಳನ್ನು ನಿಯಂತ್ರಿಸುವ ಯಾವುದೇ ಸ್ಪಷ್ಟ ನಿಯಮಗಳಿಲ್ಲ. ಮಾನವ ಭ್ರೂಣಗಳ ಸ್ಟೆಮ್ ಸೆಲ್ ಪಡೆದ ಮಾದರಿಗಳ ರಚನೆ ಮತ್ತು ಬಳಕೆಗೆ ಚೌಕಟ್ಟನ್ನು ಒದಗಿಸಲು ನಿಯಮಾವಳಿಗಳ ತುರ್ತು ಅವಶ್ಯಕತೆಯಿದೆ ಎಂದು ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್‌ನ ಸಹಾಯಕ ಸಂಶೋಧನಾ ನಿರ್ದೇಶಕ ಜೇಮ್ಸ್ ಬ್ರಿಸ್ಕೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಾ. ಮ್ಯಾಗ್ಡಲೀನಾ ಝೆರ್ನಿಕಾ-ಗೋಯೆಟ್ಜ್ ಅವರು ಬೋಸ್ಟನ್‌ನಲ್ಲಿನ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಸ್ಟೆಮ್ ಸೆಲ್ ರಿಸರ್ಚ್‌ನ ವಾರ್ಷಿಕ ಸಭೆಗೆ ಬುಧವಾರ ನೀಡಿದ ವರದಿಯಲ್ಲಿ ಈ ಕುರಿತಾದ ವಿವರಿಸಿದ್ದಾರೆ. ಕ್ಯಾಲ್ಟೆಕ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರ ಮತ್ತು ಜೈವಿಕ ಇಂಜಿನಿಯರಿಂಗ್ ಪ್ರಾಧ್ಯಾಪಕರಾದ ಝೆರ್ನಿಕಾ-ಗೋಯೆಟ್ಜ್, ಸಂಶೋಧನೆಯು ಉತ್ತಮವಾದ ವೈಜ್ಞಾನಿಕ ಜರ್ನಲ್‌ನಲ್ಲಿ ಅಂಗೀಕರಿಸಲ್ಪಟ್ಟಿದೆ ಆದರೆ ಪ್ರಕಟಿಸಲಾಗಿಲ್ಲ ಎಂದು ಹೇಳಿದರು.