ವಿಶ್ವದ ಮೂರು ಆರ್ಥಿಕ ದೇಶಗಳಲ್ಲಿ ಭಾರತವು ಒಂದಾಗಲಿದೆ

ಮೋದಿ ವಿಶ್ವಾಸ
ನವದೆಹಲಿ,ಆ.೨೮- ಈ ದಶಕದಲ್ಲಿ ವಿಶ್ವದ ಅಗ್ರ ಮೂರು ಆರ್ಥಿಕತೆಯ ದೇಶಗಳಲ್ಲಿ ಭಾರತ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವದ ಅಗ್ರ ಆರ್ಥಿಕ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಲಿದೆ. ಈ ಬಗ್ಗೆ ಗ್ಯಾರಂಟಿಕೊಡುವುದಾಗಿ ಹೇಳಿದ ಅವರು ಇದರಿಂದ ದೇಶದಲ್ಲಿ ಅನೇಕ ಅವಕಾಶಗಳು ಸೃಷ್ಠಿಯಾಗಲಿವೆ ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಮುನ್ನೆಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಹೊಸದಾಗಿ ನೇಮಕಗೊಂಡ ಸುಮಾರು ೫೧ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ದೇಶಾದ್ಯಂತ ೪೫ ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲಕ್ಕೆ ವರ್ಚುವಲ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಿ ಹೊಸದಾಗಿ ಕೆಲಸಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶುಭ ಹಾರೈಸಿ ಅವರು ಮಾತನಾಡಿದರು.
ವೋಕಲ್ ಫಾರ್ ಲೋಕಲ್ ಪ್ರತಿಯೊಬ್ಬ ಭಾರತೀಯನ ಮಂತ್ರವಾಗಬೇಕು ಎಂದು ಹೇಳಿದ ಪ್ರಧಾನಿ ಅವರು, ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯೂ ಹೆಚ್ಚುತ್ತಿದೆ ಎಂದು ಅವರು ತಿಳಿಸಿದ್ದಾರೆ.
೧೪ ಕೋಟಿ ಉದ್ಯೋಗ:
ಪ್ರವಾಸೋದ್ಯಮ ಕ್ಷೇತ್ರ ೨೦೩೦ ರ ವೇಳೆಗೆ ಭಾರತೀಯ ಆರ್ಥಿಕತೆಗೆ ೨೦ ಲಕ್ಷ ಕೋಟಿ ರೂಪಾಯಿ ಕೊಡುಗೆಯಾಗಿ ನೀಡುವ ಸಾಧ್ಯತೆಯಿದೆ, ಈ ಕ್ಷೇತ್ರದಿಂದ ಯುವಜನರಿಗೆ ೧೩-೧೪ ಕೋಟಿ ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದು ಅವರು ಹೇಳಿದ್ದಾರೆ.
ದೇಶದ ಔಷಧ ಕ್ಷೇತ್ರದಲ್ಲಿ ಅನೇಕ ಯುವಜನರ ಅಗತ್ಯವಿದೆ. ಇದಕ್ಕೆ ತಕ್ಕಂತೆ ಉದ್ಯೋಗವಾಕಾಶ ಹೆಚ್ಚು ಮಾಡಲಾಗುವುದು.ಇದರಿಂದ ಸಾಕಷ್ಟು ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದಿದ್ಧಾರೆ.ಫಾರ್ಮಾ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ ಇದು ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ…ಆಟೊಮೊಬೈಲ್ ಉದ್ಯಮವೂ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಎರಡೂ ಕೈಗಾರಿಕೆಗಳು ಫಾರ್ಮಾ ಮತ್ತು ಆಟೋಮೊಬೈಲ್ ಉದ್ಯಮಗಳಿಂದ ಮುಂಬರುವ ದಿನಗಳಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲಿವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಒಂದು ಕಾಲದಲ್ಲಿ ಅಪರಾಧಕ್ಕೆ ಹೆಸರುವಾಸಿಯಾಗಿತ್ತು, ಆದರೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪನೆಯಾದ ನಂತರ, ಅದು ತನ್ನ ಹೂಡಿಕೆಗಳಿಗೆ ಹೆಸರುವಾಸಿಯಾಗಿದೆ ಎಂದು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ
ವಿವಿಧ ಸೇವೆಗಳಿಗೆ ಆಯ್ಕೆ:
ದೇಶದಾದ್ಯಂತ ಕಂದಾಯ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಲಸಂಪನ್ಮೂಲ ಇಲಾಖೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ ಸೇರಿ ವಿವಿಧ ಸಚಿವಾಲಯಗಳು ಹಾಗೂ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಗೆ ಆಯ್ಕೆಯಾದ ಮಂದಿಗೆ ನೇಮಕಾತಿ ಪತ್ರ ವಿತರಿಸಿದರು.
ಜುಲೈನಲ್ಲಿ ೨೨ರಂದು ರೋಜ್‌ಗಾರ್ ಯೋಜನೆಯಡಿ ವಿವಿಧ ಉದ್ಯೋಗಗಳಿಗೆ ಹೊಸದಾಗಿ ನೇಮಕವಾಗಿರುವ ಸುಮಾರು ೭೦ ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರಗಳನ್ನು ಮೋದಿ ವಿತರಿಸಿದ್ದರು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

ಉದ್ಯೋಗ ಸೃಷ್ಟಿಗೆ ಆದ್ಯತೆ
ದೇಶದಲ್ಲಿ ಯುವ ಜನತೆಗೆ ಉದ್ಯೋಗ ಸೃಷ್ಟಿ ಮಾಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಹಿರಿದು ಎಂದು ಹೇಳಿದ್ಧಾರೆ.
ದೇಶ ಸೇವೆ ಮಾಡಲು ಯುವಕರು ಹಂಬಲ ಹೊಂದಿದ್ದಾರೆ. ಸರ್ಕಾರಿ ನೌಕರಿಗೆ ಸೇರಿದ ಮಂದಿಯನ್ನು ಅಮೃತ ಕಾಲದಲ್ಲಿ ಭಾರತದ ಜನರ ’ಅಮೃತ ರಕ್ಷಕರು’ ಎಂದು ಕರೆಯುವುದಾಗಿ ಹೇಳಿದರು.
ಮುಂದಿನ ೨೫ ವರ್ಷಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಾರೆ ಮತ್ತು ದೇಶವಾಸಿಗಳನ್ನು ಸಹ ರಕ್ಷಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ
ಅರೆಸೇನಾ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆ ಮಾಡಲಾಗಿದೆ. ಈ ಮೂಲಕ ಹೆಚ್ಚು ಹೆಚ್ಚು ಉದ್ಯೋಗ ಸಿಗುವಂತಾಗಲಿದೆ ಎಂದಿದ್ದಾರೆ.