ವಿಶ್ವದ ಬೆಳವಣಿಗೆಗೆ ಭಾರತ ಇಂಜಿನ್ : ಮೋದಿ


ಚೆನ್ನೈ , ಜು.೨೯ – ದೇಶದಲ್ಲಿ ಡ್ರೋಣ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿನ ಸುಧಾರಣೆಗಳು ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಕಾರ್ಪೊರೇಟ್ ತೆರಿಗೆ ಕಡಿತ ಮಾಡಿರುವುದರಿಂದ ಹೊಸ ಹೂಡಿಕೆಗಳು ಉದ್ಯಮವನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಅಣ್ಣಾ ವಿಶ್ವವಿದ್ಯಾನಿಲಯದ ೪೨ನೇ ಘಟಿಕೋತ್ಸವದಲ್ಲಿ, ಪದವಿ ಪ್ರದಾನ ಮಾಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಹೊಸ ಅವಕಾಶ ಸೃಷ್ಟಿಗೆ ಹೆದ್ದಾರಿಯಾಗಿದೆ ಎಂದಿದ್ದಾರೆ.
ಪದವೀಧರರಾಗಿರುವ ಎಲ್ಲರಿಗೂ ಅಭಿನಂದನೆಗಳು, ಇದು ಕೇವಲ ಸಾಧನೆಗಳ ದಿನವಲ್ಲ, ಬದಲಾಗಿ ಭವಿಷ್ಯದ ಆಕಾಂಕ್ಷೆಗಳ ದಿನವಾಗಿದೆ”. ವಿದ್ಯಾರ್ಥಿಗಳು ಭವಿಷ್ಯದ ನಾಯಕರು ಎಂದು ಕರೆದಿದ್ದಾರೆ.
ವಿವೇಕಾನಂದರು ಭಾರತದ ಯುವಜನತೆಯ ಸಾಧ್ಯತೆಗಳ ಬಗ್ಗೆ ಹೇಳಿದ ಮಾತುಗಳನ್ನು ನೆನಪಿಸಿಕೊಂಡ ಪ್ರಧಾನಿ, ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ. ಏಕೆಂದರೆ ಯುವಜನರು ದೇಶದ ಬೆಳವಣಿಗೆಯ ಎಂಜಿನ್ ಮತ್ತು ಭಾರತ ವಿಶ್ವದ ಬೆಳವಣಿಗೆಯ ಎಂಜಿನ್” ಎಂದು ಕರೆದಿದ್ದಾರೆ.
ದೇಶದ ಶಿಕ್ಷಕರಿಗೆ ಮತ್ತು ಇತರ ಸಿಬ್ಬಂದಿ ದೇಶ ನಿರ್ಮಾಣದ ಪಾಲುದಾರರು ನಾಳೆಯ ನಾಯಕರನ್ನು ಹುಟ್ಟುಹಾಕುವ ಸಾಧಕರು ಎಂದು ಗುಣಗಾನ ಮಾಡಿದ್ದಾರೆ.
ವಿಜ್ಞಾನಿಗಳಿಗೆ ಅಭಿನಂಧನೆ:
ಶತಮಾನಕ್ಕೆ ಒಮ್ಮೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗ, ಈ ಬಾರಿ ಕೋವಿಡ್ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಭಾರತ ಮಾತ್ರವಲ್ಲ ಜಗತ್ತು ತತ್ತರಿಸಿದೆ. ಇಂತಹ ಸಮಯದಲ್ಲಿ ದೇಶದ ವಿಜ್ಞಾನಿಗಳ ಸಂಶೋಧನೆ ಮಾದರಿ ಎಂದು ಹೇಳಿದ್ದಾರೆ.
ಕೋವಿಡ್ ಯಾರೂ ನಿರೀಕ್ಷಿಸದ ಬಹುದೊಡ್ಡ ಆಘಾತ. ಆದರೂ ಅದನ್ನು ಸಮರ್ಥವಾಗಿ ಎದುರಿಸಿದ್ದೇವೆ. ನಮ್ಮ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಸಾಮಾನ್ಯ ಜನರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ದೇಶದಲ್ಲಿ ಉದ್ಯಮದ ಪ್ರಗತಿ ಏರಿಕೆಯಾಗಿದೆ. ಕಳೆದ ವರ್ಷ, ಭಾರತ, ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ಎನ್ನುವ ಹೆಗ್ಗಳಿಕೆ ಪಡೆದಿದೆ. ಕಳೆದ ೬ ವರ್ಷಗಳಲ್ಲಿ, ಮಾನ್ಯತೆ ಪಡೆದ ನವೋದ್ಯಮಗಳ ಸಂಖ್ಯೆ ಶೇ.೧೫ ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ , ಶಿಕ್ಷಣ ಸಚಿವ ಕೆ. ಪೊನ್ಮುಡಿ ಸೇರಿದಂತೆ ಅನೇಕರಿದ್ದರು.