
ದೆಹಲಿ, ಆ.೩೦- ಈಗಾಗಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ಗುರುತಿಸಿಕೊಂಡಿರುವ ಭಾರತ ಇದೀಗ ಡಿಜಿಟಲ್ ಪೇಮೆಂಟ್ ಮೂಲಕ ಜಾಗತಿಕ ಮಟ್ಟದಲ್ಲೇ ಕ್ರಾಂತಿ ಎಬ್ಬಿಸಿದೆ. ಭಾರತವು ತನ್ನದೇ ಸ್ವಂತ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಮೂಲಕ ಇದೀಗ ಡಿಜಿಟಲ್ ಪೇಮೆಂಟ್ ವಿಚಾರದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಸದ್ಯ ಇದೇ ಯುಪಿಐ ತಂತ್ರಜ್ಞಾನವನ್ನು ಇತರೆ ಹಲವು ದೇಶಗಳು ಅಳವಡಿಸಿಕೊಳ್ಳುತ್ತಿರುವುದು ಸಹಜವಾಗಿಯೇ ಭಾರತದ ಖ್ಯಾತಿಯನ್ನು ಮುಗಿಲೆತ್ತರಕ್ಕೆ ವ್ಯಾಪಿಸುವಂತೆ ಮಾಡಿದೆ.
ಒಂದು ಸಮಯದಲ್ಲಿ ಸಾಮಾನ್ಯ ಜನರ ಕೈಗೆ ಎಟುಕದ ಕನಸಾಗಿದ್ದ ಇಂಟರ್‌ನೆಟ್ ೨೦೧೪ರಿಂದ ಭಾರತದಾದ್ಯಂತ ವ್ಯಾಪಕವಾಗಿ ವಿಸ್ತರಣೆಯಾಗುತ್ತಿದೆ. ಸದ್ಯ ೫ಜಿ ಕೂಡ ಹೊರಬಂದಿದ್ದು, ವೇಗದಲ್ಲೇ ಇದರ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಆದರೆ ಯುಪಿಐ ಮಾತ್ರ ಕೇವಲ ಭಾರತವಲ್ಲದೆ ಇದೀಗ ಹಲವು ದೇಶಗಳಲ್ಲಿ ಅಳವಡಿಕೆಯಾಗುತ್ತಿದೆ. ಸದ್ಯ ಜಗತ್ತಿನ ಸರಾಸರಿ ೧೦೦ ಡಿಜಿಟಲ್ ವ್ಯವಹಾರಗಳಲ್ಲಿ ಬರೊಬ್ಬರಿ ೪೦ ಪ್ರತಿಶತ ಹಣದ ವ್ಯವಹಾರಗಳು ಭಾರತದಲ್ಲಿ ನಡೆಯುತ್ತಿರುವುದು ಯುಪಿಐನ ಪ್ರಾಮುಖ್ಯತೆಯನ್ನು ಜಗತ್ತಿನ ಮುಂದೆ ಇಟ್ಟಿದೆ. ದೇಶದ ಪ್ರತೀ ಗಲ್ಲಿ ಗಲ್ಲಿಯಲ್ಲೂ ಕ್ಯೂ ಆರ್ ಕೋಡ್ ಮೂಲಕ ಯುಪಿಐ ತನ್ನ ಡಿಜಿಟಲ್ ಮೇಪೆಂಟ್ ವ್ಯವಸ್ಥೆಯನ್ನು ವಿಸ್ತರಿಸಿದೆ. ಇದಕ್ಕೆ ಪೂರಕವೆಂಬಂತೆ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಕೂಡ ವಿಶ್ವದ ಹಲವು ಕಡೆಗಳಲ್ಲಿ ಯುಪಿಐ ಪ್ರಾಮುಖ್ಯತೆಯನ್ನು ಜಗತ್ತಿಗೆ ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲೂ ಕೂಡ ಮೋದಿಯವರು ಯುಪಿಐ ಬಗ್ಗೆ ಗುಣಗಾನ ಮಾಡುವ ಮೂಲಕ ಭಾರತದ ಸಾಧನೆಯನ್ನು ಮತ್ತೆ ಜಗಜ್ಜಾಹೀರುಗೊಳಿಸಿದ್ದಾರೆ. ಯುಪಿಐ ಅನ್ನು ಬೀದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಎಲ್ಲಾ ಹಂತಗಳಲ್ಲಿ ಬಳಸಲಾಗುತ್ತದೆ. ಇಂದು ವಿಶ್ವದ ಎಲ್ಲಾ ದೇಶಗಳಲ್ಲಿ ಭಾರತವು ಅತಿ ಹೆಚ್ಚು ಡಿಜಿಟಲ್ ವಹಿವಾಟು ಹೊಂದಿರುವ ದೇಶವಾಗಿದೆ ಎಂದು ಮೋದಿಯವರು ಬ್ರಿಕ್ಸ್ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಸದ್ಯ ಈಗಾಗಲೇ ವಿಶ್ವದ ಹಲವು ಕಡೆಗಳಲ್ಲಿ ಭಾರತದ ಯುಪಿಐ ವ್ಯವಸ್ಥೆ ಜಾರಿಯಾಗಿದೆ. ಈಗಾಗಲೇ ಫ್ರಾನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಶ್ರೀಲಂಕಾ ಮುಂತಾದ ದೇಶಗಳಲ್ಲಿ ಯುಪಿಐ ಜಾರಿಯಾಗಿದ್ದು, ಇಲ್ಲಿ ನೆಲೆಸಿರುವ ಭಾರತೀಯರಿಗೆ ಇದರ ಪ್ರಯೋಜನ ಲಭಿಸಲಿದೆ. ಅದೂ ಅಲ್ಲದೆ ಈ ದೇಶಗಳಿಗೆ ತೆರಳುವ ಭಾರತೀಯ ಪ್ರವಾಸಿಗರಿಗೂ ಇದರ ಪ್ರಯೋಜನ ಲಭಿಸಲಿದೆ. ಅದರಲ್ಲೂ ಯುರೋಪ್‌ನ ಪ್ರಮುಖ ರಾಷ್ಟ್ರವಾಗಿರುವ ಫ್ರಾನ್ಸ್‌ಗೆ ಯುಪಿಐ ಪ್ರವೇಶದಿಂದ ಭಾರತಕ್ಕೆ ಆರ್ಥಿಕವಾಗಿ ದೊಡ್ಡ ಮುನ್ನಡೆ ಲಭಿಸಲಿದೆ ಎನ್ನಲಾಗಿದೆ. ಫ್ರಾನ್ಸ್ ಬಳಿಕ ಮುಂದಿನ ದಿನಗಳಲ್ಲಿ ಯುರೋಪ್‌ನ ಇತರೆ ದೇಶಗಳಿಗೂ ಯುಪಿಎ ಪ್ರವೇಶಿಸಲಿದೆ ಎನ್ನಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾರ್ಯಗಳು ಬಹುತೇಕ ಅಂತಿಮ ಹಂತದಲ್ಲಿದೆ. ಭಾರತೀಯ ಪ್ರಯಾಣಿಕರು ವಿಶೇಷವಾಗಿ ಫ್ರಾನ್ಸ್‌ನಲ್ಲಿ ವಿದೇಶಿ ವಿನಿಮಯವನ್ನು ಸುಲಭವಾಗಿ ಬಳಸುತ್ತಾರೆ. ಯುಪಿಐ ಬೆಳೆಯುತ್ತಿರುವ ಜಾಗತಿಕ ಹೆಜ್ಜೆಗುರುತು ದ್ವಿಪಕ್ಷೀಯ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಬಿ೨ಬಿ ಸಾಸ್ ಪ್ಲಾಟ್‌ಫಾರ್ಮ್ ಟ್ರೀಝಿಕ್ಸ್‌ನ ಸಹ ಸಂಸ್ಥಾಪಕ ಸಹ-ಸಂಸ್ಥಾಪಕ ಹರೇಶ್ ಕಲ್ಕತ್ತಾವಾಲಾ ತಿಳಿಸಿದ್ದಾರೆ. ಯುಪಿಐ ಬೆಳೆಯುತ್ತಿರುವ ಜಾಗತಿಕ ಹೆಜ್ಜೆಗುರುತು ಭಾರತೀಯ ಫಿನ್‌ಟೆಕ್ ವಲಯಕ್ಕೆ ಹೆಚ್ಚಿನ ಅವಕಾಶಗಳ ಸಂಕೇತವಾಗಿದೆ. ಕಳೆದ ೨೦೨೨ ರಲ್ಲಿ ೪.೮ ಶತಕೋಟಿ ಡಾಲರ್ ಮೌಲ್ಯದ ಹಣವನ್ನು ಯುಪಿಐ ಆಕರ್ಷಿಸಿದ್ದು, ಹಾಗಾಗಿ ೨೦೩೦ ರ ವೇಳೆಗೆ $ ೨ ಟ್ರಿಲಿಯನ್ ಉದ್ಯಮವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಹಾಗಾಗಿ ಒಟ್ಟಿನಲ್ಲಿ ಯುಪಿಐ ಮೂಲಕ ಮುಂದಿನ ದಿನಗಳಲ್ಲಿ ಭಾರತವು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.